ಬೆಂಗಳೂರು : ನಗರದಲ್ಲಿ ಗಣೇಶ ಹಬ್ಬ ಸೆಪ್ಟೆಂಬರ್ 10ರಂದು ಆಚರಿಸಲಾಗುತ್ತಿದೆ. ಇದನ್ನು ಪರಿಸರ ಸ್ನೇಹಿಯಾಗಿ ಆಚರಿಸುವ ಬಗ್ಗೆ ಹಾಗೂ ಕೋವಿಡ್ ಸೋಂಕು ಹರಡುವುದನ್ನ ತಡೆಗಟ್ಟುವ ನಿಟ್ಟಿನಲ್ಲಿ ಪಾಲಿಸಬೇಕಾದ ಮಾರ್ಗಸೂಚಿಗಳ ಬಗ್ಗೆ ಬಿಬಿಎಂಪಿ ಸುತ್ತೋಲೆ ಹೊರಡಿಸಿದೆ.
ಮೊನ್ನೆಯಷ್ಟೇ ರಾಜ್ಯ ಸರ್ಕಾರ ಕನಿಷ್ಟ ಐದು ದಿನಗಳ ಗಣೇಶೋತ್ಸವಕ್ಕೆ ಅವಕಾಶ ನೀಡಿತ್ತು. ಆದರೆ, ಬಿಬಿಎಂಪಿ ನಗರದ ಪರಿಸ್ಥಿತಿಗನುಗುಣವಾಗಿ ಕೇವಲ ಮೂರು ದಿನ ಮಾತ್ರ ಗಣೇಶ ಹಬ್ಬ ಆಚರಣೆಗೆ ಅವಕಾಶ ನೀಡಿದೆ.
ಮಾರ್ಗಸೂಚಿಗಳು ಹೀಗಿವೆ :
1. ಸಾರ್ವಜನಿಕ ಸ್ಥಳಗಳಲ್ಲಿ 4 ಅಡಿ ಎತ್ತರ, ಮನೆಯಲ್ಲಿ 2 ಅಡಿ ಎತ್ತರದ ಮೂರ್ತಿ ಪ್ರತಿಷ್ಠಾಪನೆಗೆ ಅವಕಾಶ.
2. 198 ವಾರ್ಡ್ಗಳಲ್ಲಿ ಒಂದು ಸಾರ್ವಜನಿಕ ಗಣೇಶ ಮೂರ್ತಿಗೆ ಅವಕಾಶ. ಆದರೆ, ಸ್ಥಳ ಪಾಲಿಕೆ ನಿಗದಿ ಮಾಡುತ್ತದೆ.
3. ಸೆ.8ರ ಒಳಗಾಗಿ ಜಾಗ ನಿಗದಿಪಡಿಸಿ ಅನುಮತಿ ಕೊಡುವ ವ್ಯವಸ್ಥೆ ಮಾಡಿಕೊಳ್ಳುವುದು.
4. ಟ್ರಾಫಿಕ್ ಸಮಸ್ಯೆ ಆಗದಂತೆ ಗಣೇಶಮೂರ್ತಿ ಪ್ರತಿಷ್ಠಾಪನೆ ಮಾಡಬೇಕು. ಇದಕ್ಕೆ ಆಯಾ ವಾರ್ಡ್ ವ್ಯಾಪ್ತಿಯ ಸಂಚಾರಿ ಪೊಲೀಸರ ಉಸ್ತುವಾರಿ ಇರಲಿದೆ.
5. ಮೂರ್ತಿ ಪ್ರತಿಷ್ಠಾಪನೆ ಜಾಗದಲ್ಲಿ 20 ಮಂದಿಗೆ ಮಾತ್ರ ಅವಕಾಶ. ಇಲ್ಲಿ ಹೋಂಗಾರ್ಡ್ ಹಾಗೂ ಮಾರ್ಷಲ್ಸ್ ಉಸ್ತುವಾರಿ ಇರುತ್ತದೆ. ಸಾರ್ವಜನಿಕರು ನಿಯಮ ತಪ್ಪಿದರೆ ದಂಡ ವಿಧಿಸಲಾಗುವುದು.