ಬೆಂಗಳೂರು: ಬಿಬಿಎಂಪಿ ಸರ್ವ ರೀತಿಯಲ್ಲಿ ತನ್ನೆಲ್ಲಾ ಸಿಬ್ಬಂದಿಯನ್ನು ಕೋವಿಡ್-19 ವಿರುದ್ಧ ಹೋರಾಟಕ್ಕೆ ಸಜ್ಜಾಗಲು ತರಬೇತಿ ನೀಡುತ್ತಿದೆ. ಇದೀಗ ಗರ್ಭಿಣಿಯರು ಹಾಗೂ ವಿಕಲಚೇತನರನ್ನು ಹೊರತುಪಡಿಸಿ, ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳಿಗೆ ಗುರುವಾರ ತುರ್ತು ತರಬೇತಿ ನೀಡಲು ಕರೆ ನೀಡಿದೆ.
ಕೋವಿಡ್-19 ಸೋಂಕಿತ ವ್ಯಕ್ತಿಯ ಜೊತೆ ಸಂಪರ್ಕದಲ್ಲಿರುವವರ ಸಂಪರ್ಕಕ್ಕೆ ಬಂದಿರುವ ಪ್ರಾಥಮಿಕ, ದ್ವಿತೀಯ ಸಂಪರ್ಕದಲ್ಲಿರುವ ವ್ಯಕ್ತಿಗಳನ್ನು ಪತ್ತೆ ಹಚ್ಚುವ ಕಾರ್ಯವನ್ನು ನಿರ್ವಹಿಸಲು ಪಾಲಿಕೆ ವ್ಯಾಪ್ತಿಯ 27 ವಿಧಾನಸಭಾ ಕ್ಷೇತ್ರಗಳ ಒಟ್ಟು 1,328 ತಂಡಗಳನ್ನು ರಚಿಸಲಾಗಿದೆ. ಈ ಪೈಕಿ ತಂಡಗಳಲ್ಲಿ ಒಟ್ಟು 8,146 ಮತಗಟ್ಟೆ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಿಕೊಳ್ಳಲಾಗಿದ್ದು, ನಿಗದಿತ ಸಮಯದಲ್ಲಿ ಹಾಗೂ ವಿವಿಧ ಆಯ್ದ ಸ್ಥಳಗಳಲ್ಲಿ ತರಬೇತಿ ನೀಡಲಾಗುತ್ತದೆ ಎಂದು ತಿಳಿಸಿದೆ.
ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ 4 ಕಡೆ 62 ತಂಡಗಳಿಗೆ(376 ಮಂದಿ), ಕೆ.ಆರ್.ಪುರದಲ್ಲಿ 4 ಕಡೆ 73 ತಂಡಗಳಿಗೆ(437 ಮಂದಿ), ಬ್ಯಾಟರಾಯನಪುರದಲ್ಲಿ 3 ಕಡೆ 66 ತಂಡಗಳಿಗೆ(397 ಮಂದಿ), ಯಶವಂತಪುರದಲ್ಲಿ 4 ಕಡೆ 75 ತಂಡಗಳಿಗೆ(461 ಮಂದಿ), ಬೆಂಗಳೂರು ದಕ್ಷಿಣದಲ್ಲಿ 3 ಕಡೆ 89 ತಂಡಗಳಿಗೆ(520 ಮಂದಿ) ಸೇರಿದಂತೆ ಒಟ್ಟು 1,328 ತಂಡಗಳಿಗೆ(8,146 ಮಂದಿ) ತರಬೇತಿ ನೀಡಲು ಸಿದ್ಧತೆ ಮಾಡಲಾಗಿದೆ. ಗೈರಾದಲ್ಲಿ ಕಾನೂನು ರೀತಿಯ ಕ್ರಮ ಕೈಗೊಳ್ಳಲು ಸಹಾ ಮುಂದಾಗಿದೆ.
ವೈದ್ಯಾಧಿಕಾರಿ ಹುದ್ದೆಗೆ ಗುತ್ತಿಗೆ ಆಧಾರದ ಮೇಲೆ ನೇಮಕ
ಕೊರೊನಾ ವೈರೆಸ್ ಸೋಂಕನ್ನು ನಿಯಂತ್ರಿಸುವ ಹಿನ್ನೆಲೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಖಾಲಿ ಇರುವ ವೈದ್ಯಾಧಿಕಾರಿಗಳ ಹುದ್ದೆಗಳಿಗೆ ತಾತ್ಕಾಲಿಕವಾಗಿ 6 ತಿಂಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೇರ ಸಂದರ್ಶನದ ಮೂಲಕ ನೇಮಕಾತಿ ಮಾಡಿಕೊಳ್ಳಲು ಪಾಲಿಕೆ ಮುಂದಾಗಿದೆ. 02.04.2020ರಂದು ಬೆಳಗ್ಗೆ 10.30ರಿಂದ ಸಂಜೆ 5.30ರವರೆಗೆ ಸಿ.ಪಿ.ಎಂ.ಒ ಕಚೇರಿ, ಅನೆಕ್ಸ್-03 ಕಟ್ಟಡ, 2ನೇ ಮಹಡಿ, ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ನೇರ ಸಂದರ್ಶನ ನಡೆಯಲಿದೆ.