ಬೆಂಗಳೂರು : ಸ್ವಯಂ ಘೋಷಣೆಯ ಪದ್ದತಿಯಡಿ ಆಸ್ತಿಗಳ ವಲಯ ವರ್ಗೀಕರಣ ತಪ್ಪಾಗಿ ಗುರುತಿಸಿ ತೆರಿಗೆ ವಂಚನೆ ತಪ್ಪಿಸುವ ಉದ್ದೇಶದಿಂದ ವಲಯ ವರ್ಗೀಕರಣ ಆಯ್ಕೆಯನ್ನು ಸ್ವಯಂ ಚಾಲಿತವಾಗಿ ನಮೂದು ಆಗುವಂತೆ ತಂತ್ರಾಂಶ ಅಭಿವೃದ್ಧಿ ಪಡಿಸಿ ಪಾಲಿಕೆ ಜಾರಿಗೆ ತಂದಿದೆ.
ತೆರಿಗೆದಾರರು ತಮ್ಮ ಸ್ವತ್ತಿನ ವಿವರ ಮತ್ತು ವಲಯಗಳನ್ನು ತಪ್ಪಾಗಿ ಗುರುತಿಸಿ ಪಾಲಿಕೆಗೆ ತೆರಿಗೆ ವಂಚನೆ ಮಾಡಿದ್ದಾರೆ. ಇದರಿಂದ ಪಾಲಿಕೆಗೆ ಆಸ್ತಿ ತೆರಿಗೆಯ ಸಂಗ್ರಹದಲ್ಲಿ ನಷ್ಟ ಉಂಟಾಗುತ್ತಿದೆ. ಇದನ್ನು ತಪ್ಪಿಸಲು ವಲಯಗಳು ಸ್ವಯಂಚಾಲಿತ ನಮೂದಾಗುವ ತಂತ್ರಾಂಶ ಅಭಿವೃದ್ಧಿ ಮಾಡಲಾಗಿದೆ ಎಂದು ಪಾಲಿಕೆ ತಿಳಿಸಿದೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ 2008-09ನೇ ಸಾಲಿನಿಂದ ಸ್ವಯಂ ಘೋಷಣೆ ಆಸ್ತಿ ತೆರಿಗೆ ಪದ್ದತಿಯನ್ನು ಜಾರಿಗೊಳಿಸಲಾಗಿದೆ. ಆಸ್ತಿಗಳ ಮಾಲೀಕರೇ ತಮ್ಮ ಸ್ವತ್ತುಗಳ ಆಸ್ತಿ ತೆರಿಗೆ ಘೋಷಣೆಗಳನ್ನು ಸಲ್ಲಿಸಬೇಕು ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ವಲಯ ವರ್ಗೀಕರಣದ ವಿವರಗಳನ್ನು 2008 ಮತ್ತು 2016ನೇ ಸಾಲಿನಲ್ಲಿ ಪ್ರಕಟವಾದ ಅಧಿಸೂಚನೆಯಂತೆ ತಂತ್ರಾಂಶದಲ್ಲಿ ಅಳವಡಿಸಲಾಗಿದೆ ಎಂದು ಹೇಳಿದೆ.
ಆಸ್ತಿ ತೆರಿಗೆ ಲೆಕ್ಕಾಚಾರಕ್ಕೆ 6 ವಲಯಗಳಾಗಿ ವಿಂಗಡಣೆ : ಆಸ್ತಿ ತೆರಿಗೆ ಲೆಕ್ಕಾಚಾರದಲ್ಲಿ ಪಾಲಿಕೆ ವ್ಯಾಪ್ತಿಯಲ್ಲಿನ ಎಲ್ಲ ಬೀದಿಗಳು, ಪ್ರದೇಶಗಳು ಮತ್ತು ರಸ್ತೆಗಳನ್ನು 6 ವಿವಿಧ (ಎ, ಬಿ, ಸಿ, ಡಿ, ಇ, ಎಫ್) ವಲಯಗಳಾಗಿ ವಿಂಗಡಿಸಲಾಗಿದೆ. ಸ್ವತ್ತಿನ ಉಪಯೋಗ ಸ್ವಂತ ಅಥವಾ ಬಾಡಿಗೆ ಮತ್ತು ಹಲವು ವರ್ಗಗಳ ಬಳಕೆಯ ಆಧಾರದ ಮೇಲೆ ವಲಯ 'ಎ' ಯಿಂದ 'ಎಫ್'ವರೆಗೆ ಆಸ್ತಿ ತೆರಿಗೆಯ ವಿವಿಧ ದರಗಳನ್ನು ನಿಗದಿಪಡಿಸಲಾಗಿದೆ.
ತಂತ್ರಾಂಶದಲ್ಲಿ ವಲಯ ಆಯ್ಕೆಯ ಪ್ರಮುಖ ಬದಲಾವಣೆಗಳು :
- ಪಾಲಿಕೆ ವ್ಯಾಪ್ತಿಯಲ್ಲಿರುವ ಬೀದಿಗಳು, ಪ್ರದೇಶಗಳು ಮತ್ತು ರಸ್ತೆಗಳನ್ನು ಆಯ್ಕೆ ಮಾಡಿದ ನಂತರ ವಲಯ ವರ್ಗೀಕರಣ ಸ್ವಯಂಚಾಲಿತ ಆಯ್ಕೆಯಾಗುತ್ತದೆ.
- ತೆರಿಗೆದಾರರು, ಇಲಾಖೆ ಅಧಿಕಾರಿಗಳಿಗೆ ವಲಯ ಆಯ್ಕೆಯನ್ನು ನಿಷ್ಕ್ರಿಯಗೊಳಿಸಲಾಗಿದೆ.
- ವಲಯ ವರ್ಗೀಕರಣವನ್ನು ತಪ್ಪಾಗಿ ನಮೂದಿಸಿ ತೆರಿಗೆ ಘೋಷಿಸಿಕೊಂಡ ಆಸ್ತಿಗಳನ್ನು ಸರಿಯಾದ ವಲಯಗಳಿಗೆ ಸ್ಥಳಾಂತರವಾಗುವಂತೆ ಮಾಡಲಾಗಿದೆ.
- ತಪ್ಪಾಗಿ ವಲಯ ವರ್ಗೀಕರಣ ನಮೂದಿಸಿರುವ ಆಸ್ತಿಗಳನ್ನು ಮಾತ್ರ ಸ್ವಯಂ ಚಾಲಿತವಾಗಿ ನಮೂನೆ 5ರ ತೆರಿಗೆ ಲೆಕ್ಕಾಚಾರಕ್ಕೆ ಮರು ನಿರ್ದೇಶಿತನವನ್ನು ಸಾಫ್ಟವೇರ್ ಮಾಡಲಿದೆ.
- ಸ್ವತ್ತಿನ ಉಪಯೋಗ, ಬಳಕೆ ಮತ್ತು ವಿಸ್ತೀರ್ಣದಲ್ಲಿ ಬದಲಾವಣೆಗಳಿದ್ದಲ್ಲಿ ನಮೂನೆ -5ರಲ್ಲಿ ತಂತ್ರಾಂಶದಲ್ಲಿ ಘೋಷಣೆ ಸಲ್ಲಿಸಬೇಕು.
- ಸಹಾಯಕ ಕಂದಾಯ ಅಧಿಕಾರಿಗಳ ಕಚೇರಿಯಲ್ಲಿ ಹೊಸದಾಗಿ ಸೃಜಿಸಲಾದ ಆಸ್ತಿಗಳಿಗೆ ರಸ್ತೆ, ಪ್ರದೇಶ, ಬೀದಿಗಳಿಗೆ ವಲಯ ವರ್ಗೀಕರಣ ತಂತ್ರಾಂಶದಲ್ಲಿಯೇ ಸ್ವಯಂ ಭರ್ತಿಯಾಗುತ್ತವೆ.
- ಒಂದು ವೇಳೆ ಸ್ವತ್ತಿನ ಉಪಯೋಗ, ಬಳಕೆ, ವಲಯ ಹಾಗೂ ಇತ್ಯಾದಿಗಳಲ್ಲಿ ಬದಲಾವಣೆಗಳು ಇಲ್ಲದಿದ್ದರೆ ಆಸ್ತಿ ತೆರಿಗೆಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ.
- ಬದಲಾವಣೆ ಇಲ್ಲದ ಆಸ್ತಿಗಳಿಗೆ ನಮೂನೆ-4ರ ಮೂಲಕ ತಂತ್ರಾಂಶದಲ್ಲಿ ತೆರಿಗೆ ಘೋಷಿಸಿಕೊಳ್ಳಬಹುದು.
ಇದನ್ನೂ ಓದಿ: ಬಿಬಿಎಂಪಿಯಿಂದ ಆಸ್ತಿ ತೆರಿಗೆ ಸಂಗ್ರಹ ಹೆಚ್ಚಳಕ್ಕೆ ಹೊಸ ಯೋಜನೆ