ಬೆಂಗಳೂರು: ತ್ಯಾಜ್ಯ ನಿರ್ವಹಣೆ ವಿಚಾರದಲ್ಲಿ ಪಾಲಿಕೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಕಸ ವಿಂಗಡಣೆಗೆ ಹೆಚ್ಚು ಒತ್ತು ನೀಡುತ್ತಿದೆ. ಇಂದು ಕ್ಷಿಪ್ರ ಕಾರ್ಯಾಚರಣೆ ನೆಡಸಿ ರಾಜಾಜಿನಗರದಲ್ಲಿ ರಸ್ತೆ ಮಧ್ಯೆ ವೈದ್ಯಕೀಯ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಿದ್ದ ಲ್ಯಾಬ್ ಮಾಲೀಕ ಹಾಗೂ ಸಿಬ್ಬಂದಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ದಂಡ ವಸೂಲಿ ಮಾಡಲಾಗಿದೆ.
ಕೋವಿಡ್ ವೈರಸ್ ವ್ಯಾಪಕವಾಗಿ ಹರಡುತ್ತಿರುವ ಹಿನ್ನೆಲೆ ಖಾಸಗಿ ಲ್ಯಾಬ್, ಆಸ್ಪತ್ರೆಗಳಿಗೆ ಕಟ್ಟುನಿಟ್ಟಾಗಿ ತ್ಯಾಜ್ಯ ನಿರ್ವಹಣೆ ಮಾಡುವಂತೆ ಪಾಲಿಕೆ ಸೂಚಿಸಿದೆ. ಈ ನಿಟ್ಟಿನಲ್ಲಿ ರಾಜಾಜಿನಗರದಲ್ಲಿ ಇಂದು ಕಾರ್ಯಾಚರಣೆಗೆ ಇಳಿದಿದ್ದ ಪಾಲಿಕೆ ಸಿಬ್ಬಂದಿ ಹಾಗೂ ಮಾರ್ಷಲ್ಗಳು ತ್ಯಾಜ್ಯವನ್ನು ಎಲ್ಲೆಂದರಲ್ಲಿ ಸುರಿದಿದ್ದ ಲ್ಯಾಬ್ ಒಂದನ್ನು ಪತ್ತೆ ಹಚ್ಚಿ 50,000 ರೂ. ದಂಡ ವಿಧಿಸಿ, ಹಣ ವಸೂಲಿ ಮಾಡಿದ್ದಾರೆ. ಪಾಲಿಕೆ ಸಿಬ್ಬಂದಿಯ ಕರ್ತವ್ಯಪ್ರಜ್ಞೆಗೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
'ಲೈಫ್ ಸೆಲ್ ಇಂಟರ್ನ್ಯಾಷನಲ್ ಪ್ರೈವೇಟ್ ಲಿಮಿಟೆಡ್' ಎನ್ನುವ ಲ್ಯಾಬ್ ಸಿಬ್ಬಂದಿ ರಾಜಾಜಿನಗರದಲ್ಲಿ ಸ್ಯಾನಿಟರಿ/ವೈದ್ಯಕೀಯ ತ್ಯಾಜ್ಯವನ್ನು ಕೊಟ್ಟಿಗೆ ಪಾಳ್ಯದ ಪೈಪ್ ಲೈನ್ ರಸ್ತೆಯ ಪಕ್ಕದಲ್ಲಿ ಬೇಕಾಬಿಟ್ಟಿಯಾಗಿ ಸುರಿದು ಹೋಗಿದ್ದರು ಎನ್ನಲಾಗಿದೆ.