ಬೆಂಗಳೂರು: ನಾನು ಮುಖ್ಯಮಂತ್ರಿ ಆಗಬೇಕು ಎಂದಾಗಲಿ, ನನ್ನನ್ನು ಮುಖ್ಯಮಂತ್ರಿ ಮಾಡಿ ಅಂತಾ ಎಲ್ಲಿಯೂ ಹೇಳಿಲ್ಲ. ಯಾವ್ಯಾವ ಹಂತದಲ್ಲಿ ಏನೇನು ನಡೆಯಬೇಕೋ, ಅದೇ ಪ್ರಕಾರ ನಡೆಯಲಿದೆ ಎಂದು ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹೈಕಮಾಂಡ್ ಪ್ರತಿನಿಧಿಗಳ ಆಗಮನದ ಹಿನ್ನೆಲೆಯಲ್ಲಿ ಕುಮಾರಕೃಪಾ ಅತಿಥಿ ಗೃಹಕ್ಕೆ ಭೇಟಿ ನೀಡಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದು ಸಂಜೆ 7 ಗಂಟೆಗೆ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಇದೆ. ಕೇಂದ್ರದಿಂದ ವೀಕ್ಷಕರು ಹಿರಿಯರು ಎಲ್ಲಾ ಬರಲಿದ್ದಾರೆ. ಶಾಸಕಾಂಗ ಪಕ್ಷದ ಸಭೆಯಲ್ಲಿ ಎಲ್ಲ ವಿಷಯಗಳು ಪ್ರಸ್ತಾಪವಾಗಲಿವೆ. ಅದಾದ ನಂತರ ಶಾಸಕರೆಲ್ಲ ನಿರ್ಣಯ ತೆಗೆದುಕೊಳ್ಳಲಿದ್ದಾರೆ. ಆ ನಿರ್ಣಯ ಕುರಿತು ರಾಜ್ಯಮಟ್ಟದಲ್ಲಿ, ನಂತರ ಕೇಂದ್ರ ಮಟ್ಟದಲ್ಲಿ ನಿರ್ಣಯವಾಗಿ ಕೊನೆಯದಾಗಿ ಸಂಸದೀಯ ಮಂಡಳಿ ಸಭೆಯಲ್ಲಿ ಅಂತಿಮವಾಗಲಿದೆ ಎಂದರು.
ನನ್ನನ್ನು ಮುಖ್ಯಮಂತ್ರಿ ಮಾಡಿ ಎಂದಾಗಲಿ, ನಾನು ಮುಖ್ಯಮಂತ್ರಿ ಆಗುತ್ತೇನೆ ಎಂದಾಗಲಿ ಎಲ್ಲಿಯೂ ಈವರೆಗೂ ಹೇಳಿಲ್ಲ. ಎಲ್ಲವನ್ನು ಮಾಧ್ಯಮಗಳಲ್ಲೇ ನೋಡಿದ್ದೇನೆ. ಮಾಧ್ಯಮಗಳಲ್ಲಿ ಪ್ರಕಟಿಸಿದ್ದೀರಿ, ನೀವೇ ಹೇಳಬೇಕು ಅದನ್ನೆಲ್ಲ. ಆದರೆ, ಈ ಕಲ್ಪಿತ ಪ್ರಶ್ನೆಗಳಿಗೆ ನಾನು ಎಂದು ಉತ್ತರ ಕೊಡುವುದಿಲ್ಲ. ಯಾವ-ಯಾವ ಹಂತದಲ್ಲಿ ಏನೇನು ನಡೆಯುತ್ತದೆ ಎನ್ನುವುದು ಬಹಳ ಮುಖ್ಯ. ಮುಂದೆ ಆಗುವ ನಿರ್ಣಯಗಳಿಗೆ ಇಂದು ನಾನು ಉತ್ತರ ಕೊಡುವುದಿಲ್ಲ ಎಂದು ಸಿಎಂ ಸ್ಥಾನದ ಅಪೇಕ್ಷೆ ಕುರಿತು ಹಾರಿಕೆಯ ಉತ್ತರ ನೀಡಿದರು.
ಯಡಿಯೂರಪ್ಪನವರಿಗೆ ನಾನು ಆಪ್ತ ಎನ್ನುವ ಕಾರಣಕ್ಕೆ ನನ್ನ ಹೆಸರು ಸೂಚಿಸುತ್ತಾರೆ. ನನ್ನನ್ನು ಮುಖ್ಯಮಂತ್ರಿ ಮಾಡುತ್ತಾರೆ ಎನ್ನುವುದು ಸರಿಯಲ್ಲ. ಯಡಿಯೂರಪ್ಪ ಅವರಿಗೆ ಕೇವಲ ನಾನು ಮಾತ್ರ ಆಪ್ತನಲ್ಲ. ಇನ್ನೂ ಹಲವರು ಜನರಿದ್ದಾರೆ. ಆದರೆ ಇನ್ನೂ ಸಿಎಂ ಆಯ್ಕೆಯ ಹಂತಕ್ಕೆ ನಾವು ಬಂದಿಲ್ಲ. ಆ ಹಂತಕ್ಕೆ ಬಾರದೆ ನಾನು ಹೇಳಲು ಸಾಧ್ಯವಿಲ್ಲ ಎಂದರು.
ಉಸ್ತುವಾರಿ ಹೊತ್ತ ಶಾಸಕರು ಪ್ರವಾಹ ಪರಿಸ್ಥಿತಿ ನಿಭಾಯಿಸುತ್ತಾರೆ:
ರಾಜ್ಯ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಮುಖ್ಯಮಂತ್ರಿ ಹಾಗೂ ಸಚಿವರು ಇಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಇಂತಹ ಪ್ರಶ್ನೆ ಉದ್ಭವ ಆಗಲ್ಲ. ಜಿಲ್ಲೆಯ ಉಸ್ತುವಾರಿ ಹೊತ್ತ ಶಾಸಕರು ಪರಿಸ್ಥಿತಿ ನಿಭಾಯಿಸುತ್ತಿದ್ದಾರೆ ಎಂದು 'ಈಟಿವಿ ಭಾರತ'ಕ್ಕೆ ತಿಳಿಸಿದರು.
ಇದನ್ನೂ ಓದಿ: ರಾಜೀನಾಮೆ ಬಳಿಕ ಯಾವುದೇ ಗೊಂದಲ, ಆತಂಕದಲ್ಲಿ ಬಿಎಸ್ವೈ ಇಲ್ಲ: ಗುಂಡ್ಲುಪೇಟೆ ಶಾಸಕ ನಿರಂಜನ್ ಕುಮಾರ್