ಬೆಂಗಳೂರು: ತಾಂತ್ರಿಕ ಕಾರಣ ಹೊರಟ್ಟಿ ವಿಧಾನಪರಿಷತ್ ಸದಸ್ಯ ಸ್ಥಾನಕ್ಕೆ ನೀಡಿದ ರಾಜೀನಾಮೆ ಅಂಗೀಕಾರಕ್ಕೆ ಅಡ್ಡಿಯಾಗಿದೆ. ಸೋಮವಾರ ಹೊರಟ್ಟಿ ತಮ್ಮ ಸಭಾಪತಿ ಸ್ಥಾನಕ್ಕೆ ರಾಜೀನಾಮೆ ನೀಡುವುದರ ಜೊತೆಗೆ ಮೇಲ್ಮನೆ ಸದಸ್ಯ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ. ಸಭಾಪತಿ ಸ್ಥಾನಕ್ಕಾಗಿನ ರಾಜೀನಾಮೆ ಅಂಗೀಕಾರವಾಗುವ ಪ್ರಕ್ರಿಯೆ ಆರಂಭವಾಗಿದೆ. ಆದರೆ ನಿಯಮದ ಪ್ರಕಾರ ಮೇಲ್ಮನೆ ಸದಸ್ಯ ಸ್ಥಾನಕ್ಕೆ ಬಸವರಾಜ ಹೊರಟ್ಟಿ ಅವರು ಉಪಸಭಾಪತಿಗೆ ಮಾತ್ರ ರಾಜೀನಾಮೆ ನೀಡಬೇಕಾಗಿದೆ. ಉಪಸಭಾಪತಿ ಹುದ್ದೆ ಖಾಲಿ ಇರುವ ಕಾರಣದಿಂದಾಗಿ ರಾಜೀನಾಮೆಗೆ ತಡೆಯಾಗಿದೆ. ನಿಯಮಾವಳಿಗಳ ಪ್ರಕಾರ ಪರಿಷತ್ ಸದಸ್ಯ ಸ್ಥಾನಕ್ಕೆ ರಾಜೀನಾಮೆಯನ್ನು ಸಭಾಪತಿಗೆ ಸಲ್ಲಿಸಬೇಕು.
ಒಂದು ಸಭಾಪತಿ ಹುದ್ದೆ ಖಾಲಿ ಇದ್ದರೆ ಉಪಸಭಾಪತಿಗೆ ನೀಡಬೇಕು. ಹೊರಟ್ಟಿ ಅವರು ಸಭಾಪತಿಯಾಗಿರುವುದರಿಂದ ಉಪಸಭಾಪತಿಗೆ ಖುದ್ದಾಗಿ ಸಲ್ಲಿಸಬೇಕು. ಉಪಸಭಾಪತಿ ಹುದ್ದೆಗೆ ಯಾರನ್ನಾದರೂ ನೇಮಕ ಮಾಡುವವರೆಗೆ ಪರಿಷತ್ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಲು ಬರುವುದಿಲ್ಲ. ತಕ್ಷಣಕ್ಕೆ ಸರ್ಕಾರ ಹಂಗಾಮಿ ಉಪಸಭಾಪತಿಯನ್ನಾದರೂ ನೇಮಕ ಮಾಡಬೇಕಿದೆ ಎಂದು ಮೂಲಗಳು ಹೇಳಿವೆ.
ತಾಂತ್ರಿಕ ಕಾರಣದಿಂದಾಗಿ ಹೊರಟ್ಟಿ ರಾಜೀನಾಮೆಯನ್ನು ತಡೆ ಹಿಡಿದಿರುವುದರಿಂದ ಬಿಜೆಪಿ ಸೇರ್ಪಡೆ ಮುಂದೆ ಬೀಳುವ ಸಾಧ್ಯತೆ ಇದೆ. ಒಂದು ವೇಳೆ ಸರ್ಕಾರವು ಮಂಗಳವಾರವೇ ಹಂಗಾಮಿ ಸಭಾಪತಿಯನ್ನು ನೇಮಕ ಮಾಡಿದರೆ ಮಂಗಳವಾರ ಮೇಲ್ಮನೆ ಸದಸ್ಯ ಸ್ಥಾನದ ರಾಜೀನಾಮೆ ಪ್ರಕ್ರಿಯೆ ನಡೆಸಿ ಸಂಜೆ ವೇಳೆಗೆ ಬಿಜೆಪಿಗೆ ಸೇರಬಹುದು ಎನ್ನಲಾಗಿದೆ.
ಹೊರಟ್ಟಿ ಅವರ ರಾಜೀನಾಮೆ ಉಪಸಭಾಪತಿಯ ಮೂಲಕವೇ ರಾಜ್ಯಪಾಲರಿಗೆ ರವಾನೆಯಾಗಬೇಕು. ತದನಂತರ ರಾಜ್ಯಪಾಲರು ರಾಜೀನಾಮೆಯನ್ನು ಅಂಗೀಕರಿಸಲಿದ್ದಾರೆ. ಮೇಲ್ಮನೆ ಸದಸ್ಯ ಸ್ಥಾನವು ಸರ್ಕಾರೇತರ ಹುದ್ದೆಯಾಗಿರುವ ಹಿನ್ನೆಲೆಯಲ್ಲಿ ಸರ್ಕಾರಿ ಅಧಿಕಾರಿಗಳು ಆ ಸ್ಥಾನದ ರಾಜೀನಾಮೆಯನ್ನು ಅಂಗೀಕರಿಸಲು ಕಾನೂನಿನಲ್ಲಿ ಅವಕಾಶ ಇಲ್ಲ. ಸಭಾಪತಿ ಅಥವಾ ಉಪಸಭಾಪತಿಯ ಮೂಲಕವೇ ಹೋಗಬೇಕು. ಹೊರಟ್ಟಿ ಅವರು ಇನ್ನೂ ಜೆಡಿಎಸ್‌ನ ಪರಿಷತ್ ಸದಸ್ಯರಾಗಿದ್ದಾರೆ. ಅವರ ಅವಧಿಯು ಜೂ.14ಕ್ಕೆ ಮುಕ್ತಾಯಗೊಳ್ಳಲಿದೆ.
ಇದನ್ನೂ ಓದಿ: ಪರಿಷತ್ ಸಭಾಪತಿ ಸ್ಥಾನಕ್ಕೆ ಹೊರಟ್ಟಿ ರಾಜೀನಾಮೆ.. ನಾಳೆ ಬೆಂಗಳೂರಲ್ಲಿ ಬಿಜೆಪಿ ಸೇರ್ಪಡೆ