ಬೆಂಗಳೂರು: ಹೊಸ ವರ್ಷಾಚರಣೆಗಾಗಿ ಮಾರ್ಗಸೂಚಿ ಹೊರಡಿಸಲಾಗಿದ್ದು, ನಗರ ಪೊಲೀಸ್ ಆಯುಕ್ತರು ಈಗಾಗಲೇ ಮಾರ್ಗಸೂಚಿ ಬಿಡುಗಡೆ ಮಾಡಿದ್ದಾರೆ. ನಾನು ಅವರ ಜೊತೆ ಚರ್ಚೆ ಮಾಡಿದ್ದು, ಮಾರ್ಗಸೂಚಿ ಕಡ್ಡಾಯ ಪಾಲನೆಗೆ ಸೂಚಿಸಿದ್ದೇನೆ ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದರು.
ನೈಟ್ ಕರ್ಫ್ಯೂ ಜಾರಿ ಗೊಂದಲ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು ಚರ್ಚ್ ಸ್ಟ್ರೀಟ್, ಕೋರಮಂಗಲ, ಇಂದಿರಾ ನಗರದಲ್ಲಿ ಹೆಚ್ಚು ಪ್ರಮಾಣದಲ್ಲಿ ಜನ ಸೇರುತ್ತಿದ್ದರು. ಆದ್ದರಿಂದ ಈ ಕ್ರಮ ತೆಗೆದುಕೊಂಡಿದ್ದು, ಸ್ಥಳೀಯ ಡಿಸಿಪಿಗಳಿಗೂ ಜವಾಬ್ದಾರಿ ಕೊಡಲಾಗಿದೆ. ಪಬ್ಗಳ ಮೇಲೆ ನಿಗಾ ಇಡಲು ಡಿಸಿಪಿಗೆ ಜವಾಬ್ದಾರಿ ಕೊಟ್ಟಿದ್ದೇವೆ. ಎಲ್ಲೂ ಕೂಡ ಸಾರ್ವಜನಿಕವಾಗಿ ಪಾರ್ಟಿ ನಡೆಸುವಂತಿಲ್ಲ ಎಂದು ಸ್ಪಷ್ಟಪಡಿಸಿದರು.
ಓದಿ: ಎಸ್.ಎಲ್.ಧರ್ಮೇಗೌಡ ಆತ್ಮಹತ್ಯೆ ಕನ್ಫರ್ಮ್: ಜನ ಶತಾಬ್ದಿ ರೈಲು ಚಾಲಕ ಹೇಳಿದ್ದಿಷ್ಟು..
ಮೈಸೂರು, ಕೂರ್ಗ್ ಸೇರಿ ಯಾವ ಕಡೆಯೂ ಪಾರ್ಟಿಗೆ ಅವಕಾಶವಿಲ್ಲ. ಇದಕ್ಕೆ ಸಾರ್ವಜನಿಕರು ಕೂಡ ಸಹಕರಿಸಬೇಕು. ಕೋವಿಡ್ ಮಧ್ಯೆ ಜನರನ್ನು ಸೇರಿಸಿಕೊಳ್ಳಬಾರದು. ಜನರ ಆರೋಗ್ಯದ ಪ್ರಶ್ನೆ ಇಲ್ಲಿದ್ದು, ಹೊಸ ವರ್ಷಾಚರಣೆ ವೇಳೆ ಮನೆಯೊಳಗಿದ್ದರೆ ಸಮಸ್ಯೆಯಿಲ್ಲ ಎಂದು ತಿಳಿಸಿದರು.
ಬ್ರಿಟನ್ ವೈರಸ್ ಬಗ್ಗೆಯೂ ಪ್ರತಿಕ್ರಿಯಿಸುತ್ತಾ, ರೂಪಾಂತರಿ ವೈರಸ್ ಅಧಿಕೃತ ಮಾಹಿತಿ ಕೇಂದ್ರ ಸರ್ಕಾರದಲ್ಲಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಸಂಪೂರ್ಣವಾಗಿ ಪರಿಶೀಲಿಸುತ್ತಿದೆ. ಐಸಿಎಂಆರ್, ಆರೋಗ್ಯ ಇಲಾಖೆ ಗಮನಿಸುತ್ತಿದೆ. ಇದಕ್ಕಾಗಿ ತಜ್ಞರ ಸಮಿತಿ ರಚಿಸಲಾಗಿದ್ದು, ತಜ್ಞರ ಸಮಿತಿ ಹಾಗೂ ಕೇಂದ್ರ ಸರ್ಕಾರ ಸಿಎಂಗೆ ಈ ಬಗ್ಗೆ ಸೂಚನೆ ನೀಡುತ್ತದೆ. ಬಳಿಕ ಸಿಎಂ ಅಂತಿಮ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.