ಬೆಂಗಳೂರು: ಸಂಗೀತ ನಿರ್ದೇಶಕ ಹಂಸಲೇಖ ಪೇಜಾವರ ಶ್ರೀಗಳ ಕುರಿತು ಹೇಳಿಕೆ (police complaint against Hamsalekha) ಹಿನ್ನೆಲೆ ವಿವಿಧ ಠಾಣೆಗಳಲ್ಲಿ ದೂರು ದಾಖಲಾಗಿದೆ. ಇಂದು ಬಸವನಗುಡಿ ಪೊಲೀಸರು, ವಿಚಾರಣೆಗೆ ಹಾಜರಾಗದ ಹಿನ್ನೆಲೆ ಹಂಸಲೇಖ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ.
ಮೈಸೂರಿನ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅಸ್ಪೃಶ್ಯತೆ ಬಗ್ಗೆ ಸಂಗೀತ ನಿರ್ದೇಶಕ ಹಂಸಲೇಖ ಹೇಳಿಕೆ (Hamsalekha controversial statement) ನೀಡಿದ್ದು, ಭಾರಿ ವಿವಾದಕ್ಕೆ ನಾಂದಿ ಹಾಡಿತ್ತು. ಪ್ರಕರಣ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಹಂಸಲೇಖ ಕ್ಷಮೆ ಕೇಳಿದ್ದರು. ಇದರ ನಡುವೆ ಅವರ ವಿರುದ್ಧ ವಿವಿಧ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಿಸಲಾಗಿದೆ.
ಈ ವಿಚಾರಕ್ಕೆ ಸಂಬಂಧಿಸಿದಂತೆ ನಿನ್ನೆ ಬಸವನಗುಡಿ ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದರು. ಹಂಸಲೇಖ ಅವರು ಮನೆಯಲ್ಲಿ ಇಲ್ಲದ ಕಾರಣ ಅವರ ಪತ್ನಿ ನೋಟಿಸ್ ಸ್ವಿಕರಿಸಿದ್ದರು. ಅಲ್ಲದೇ, ವಾಟ್ಸ್ಆ್ಯಪ್ ಸಹ ಮಾಡಲಾಗಿತ್ತು.
ಆದರೆ ಇಂದು ವಿಚಾರಣೆಗೆ ಹಂಸಲೇಖ ಅವರು ಗೈರಾಗಿದ್ದರು. 50ಕ್ಕೂ ಹೆಚ್ಚು ಬಾರಿ ಕರೆ ಮಾಡಿದ್ರೂ ರಿಸೀವ್ ಮಾಡಿಲ್ಲ. ಈ ಹಿನ್ನೆಲೆ ಭಾನುವಾರದೊಳಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಲಾಗಿದೆ.
ವಶಕ್ಕೆ ಪಡೆದು ವಿಚಾರಣೆ ಸಾಧ್ಯ: ಇನ್ನು ಭಾನುವಾರದೊಳಗೆ ವಿಚಾರಣೆಗೆ ಹಾಜರಾಗದಿದ್ದರೆ, ಹಂಸಲೇಖ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವ ಸಾಧ್ಯತೆ ಇದೆ. ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವ ಸಂಬಂಧ ಐಪಿಸಿ ಸೆಕ್ಷನ್ 295 A ಅಡಿ ಪ್ರಕರಣ ದಾಖಲಾಗಿದೆ.
ಇದರಿಂದ ಹಂಸಲೇಖ ಅವರನ್ನ ಬಂಧಿಸುವ ಸಾಧ್ಯತೆ ಕೂಡ ಇದೆ. ಹೀಗಾಗಿ ಅವರು ನಿರೀಕ್ಷಣಾ ಜಾಮೀನಿಗೆ ಮೊರೆ ಹೋಗಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.