ಬೆಂಗಳೂರು: ಕಾರ್ತಿಕ ಮಾಸದ ಕೊನೆಯ ಸೋಮವಾರ ನಡೆಯುವ ಬಸವನಗುಡಿಯ ಐತಿಹಾಸಿಕ ಕಡಲೆಕಾಯಿ ಪರಿಷೆಗೆ ಅದ್ಧೂರಿ ಚಾಲನೆ ದೊರೆತಿದೆ.
ಮುಖ್ಯ ಆಯುಕ್ತ ಗೌರವ್ ಗುಪ್ತ, ಶಾಸಕರು ಹಾಗೂ ಮುಖಂಡರು ಪರಿಷೆಗೆ ಚಾಲನೆ ಕೊಟ್ಟಿದ್ದಾರೆ. ಇದು ಅತ್ಯಂತ ಸಂಭ್ರಮದ ಜಾತ್ರೆ. ಎಲ್ಲರೂ ಬಹಳ ವಿಜ್ರಂಭಣೆಯಿಂದ ಭಾಗಿಯಾಗಬೇಕು. ಜನರು ಮಾಸ್ಕ್ ಧರಿಸಬೇಕು, ವ್ಯಾಕ್ಸಿನೇಷನ್ ಕೂಡಾ ಮಾಡಲಾಗ್ತಿದೆ. ಮಾರ್ಷಲ್‌ಗಳು ಕೋವಿಡ್ ನಿಯಮ ಪಾಲನೆ ಆಗುವಂತೆ ನೋಡಿಕೊಳ್ಳಲಿದ್ದಾರೆ.
ಶಾಸಕ ರವಿಸುಬ್ರಹ್ಮಣ್ಯ ಮಾತನಾಡಿ, ಕಳೆದ ವರ್ಷ ಉತ್ಸವ ನಡೆಸಲು ಆಗಿಲ್ಲ. ಮಾಗಡಿ ಕೆಂಪೇಗೌಡರ ಕಾಲದಿಂದಲೂ ಬೆಂಗಳೂರಿನ ಸುತ್ತಮುತ್ತಲ ರೈತರು ಬಂದು ಕಡಲೆಕಾಯಿ ಮಾರುತ್ತಿದ್ದರು. ನಿನ್ನೆ ಒಂದೂವರೆ ಲಕ್ಷಕ್ಕೂ ಹೆಚ್ಚು ಜನ ಬಂದಿದ್ದರು. ಇಂದು ಸಂಜೆ ವೇಳೆ ಹೆಚ್ಚು ಜನ ಬರುವ ಸಾಧ್ಯತೆ ಇದೆ. ಇಂದು ಕೂಡಾ ಜನ ಮಾಸ್ಕ್ ಧರಿಸಿ ಬರಬೇಕು. ಬಟ್ಟೆ ಚೀಲಗಳನ್ನು ಮನೆಯಿಂದಲೇ ತರಬೇಕು. ಐನೂರಕ್ಕೂ ಹೆಚ್ಚು ಪೊಲೀಸರು ಇದಾರೆ. ಸಿಸಿ ಕ್ಯಾಮರಾ ಅಳವಡಿಸಲಾಗಿದೆ. ಜನರಿಗೆ ಯಾವುದೇ ಕುಂದುಕೊರತೆ ಆಗದಂತೆ ಧಾರ್ಮಿಕ ಉತ್ಸವ ಆಯೋಜಿಸಲಾಗಿದೆ. ಬೆಳೆಗಾರರ ಉತ್ಸವ ಆಗಿರುವುದರಿಂದ ಉತ್ತೇಜನ ಕೊಡಲು ಜನರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಖರೀದಿ ಮಾಡಬೇಕು ಎಂದರು.
ಕಡಲೆಕಾಯಿ ಪರಿಷೆಗೆ ಜನ ಸಂದಣಿ: ಈ ಕಾರ್ಯಕ್ರಮದಲ್ಲಿ ವಿಶೇಷ ಹಣಕಾಸು ಆಯುಕ್ತರಾದ ತುಳಸಿ ಮದ್ದಿನೇನಿ ಭಾಗಿಯಾಗಿದ್ದರು. ನಂತರ ನೆರೆದಿದ್ದ ಸಾರ್ವಜನಿಕರಿಗೆ ಕಡಲೆಕಾಯಿ ಪ್ರಸಾದ ಹಂಚಲಾಯಿತು. ಕೋವಿಡ್ ನಿಯಮ ಪಾಲಿಸುವಂತೆ, ಮಾಸ್ಕ್ ಧರಿಸುವಂತೆ ಮಾರ್ಷಲ್‌ಗಳು ರಸ್ತೆಯಲ್ಲಿ ಘೋಷಣೆ ಮಾಡುತ್ತಿದ್ದರು. ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಬ್ಯಾನ್ ಮಾಡಲಾಗಿತ್ತು. ಕಾಗದದ ಬ್ಯಾಗ್ನಲ್ಲೇ ಕಡಲೆಕಾಯಿ ಕೊಡುತ್ತಿದ್ದರು. ಸೋಮವಾರವಾದರೂ ಸಾಕಷ್ಟು ಜನ ಪರಿಷೆಗೆ ಬಂದು ಕಡಲೆಕಾಯಿ ಖರೀದಿಯಲ್ಲಿ ತೊಡಗಿದ್ದರು.