ಬೆಂಗಳೂರು: ಬೆಳ್ಳಂಬೆಳಗ್ಗೆ ಮನೆಗೆ ನುಗ್ಗಿ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ಆರೋಪಿಯನ್ನು ತಿಲಕ್ ನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಯನ್ನು ತಮಿಳುನಾಡು ಮೂಲದ ಏಜಾಜ್ (24) ಎಂದು ಗುರುತಿಸಲಾಗಿದೆ.
ಏ.12 ರಂದು ತಿಲಕ್ ನಗರ ಠಾಣಾ ವ್ಯಾಪ್ತಿಯಲ್ಲಿ ರವೀಂದ್ರನಾಥ್ ಎಂಬುವವರ ಮನೆಯಲ್ಲಿ ಕಳ್ಳತನ ನಡೆದಿತ್ತು. ರವೀಂದ್ರನಾಥ್ ಅವರ ಪತ್ನಿ ಬೀನಾ ಮನೆಯ ಬಾಗಿಲು ಲಾಕ್ ಮಾಡದೇ ಬೆಳಗ್ಗೆ ವಾಕಿಂಗ್ಗೆ ಹೋಗಿದ್ದಾಗ ಮನೆಗೆ ನುಗ್ಗಿದ್ದ ಆರೋಪಿ, ರವೀಂದ್ರನಾಥ ಅವರು ಬಾತ್ ರೂಮ್‌ಗೆ ಹೋಗಿದ್ದ ಸಮಯದಲ್ಲಿ ಮನೆಯಲ್ಲಿದ್ದ 90 ಸಾವಿರ ಮೌಲ್ಯದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ. ಆರೋಪಿ ಎಸ್ಕೇಪ್ ಆಗುತ್ತಿರುವ ದೃಶ್ಯ ಸಿಸಿಟಿಯಲ್ಲಿ ಸೆರೆಯಾಗಿದ್ದು, ಘಟನೆ ಬಗ್ಗೆ ಮನೆ ಮಾಲೀಕ ರವೀಂದ್ರನಾಥ ತಿಲಕ್ ನಗರ ಠಾಣೆಗೆ ದೂರು ನೀಡಿದ್ದರು. ದೂರಿನ ಅನ್ವಯ ಆರೋಪಿಯನ್ನು ತಿಲಕ್ ನಗರ ಠಾಣಾ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಓದಿ :'ರಾಂಗ್ ನಂಬರ್' ವಿಚಾರವಾಗಿ ದಂಪತಿ ನಡುವೆ ಜಗಳ: ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಪತ್ನಿ!