ಬೆಂಗಳೂರು: ಈಗಾಗಲೇ ರಾಜ್ಯ ರಾಜಧಾನಿ ಜನರು ವಿವಿಧ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದಾರೆ. ಇದರ ನಡುವೆಯೂ ಈಗಾಗಲೇ ನಂದಿನ ಹಾಲಿನ ದರ 3 ರೂಪಾಯಿ ಹೆಚ್ಚಳಕ್ಕೆ ಕೆಎಂಎಫ್ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದೆ. ಮತ್ತೊಂದೆಡೆ ಬೆಂಗಳೂರು ಜಲ ಮಂಡಳಿ ನೀರಿನ ದರ ಹೆಚ್ಚಳ ಮಾಡಲು ಮುಂದಾಗಿದೆ. ಈ ಮೂಲಕ ಜನರಿಗೆ ಮತ್ತೊಂದು ಶಾಕ್ ಕಾದಿದೆ.
ಈ ಸಂಬಂಧ ಬೆಂಗಳೂರು ಜಲ ಮಂಡಳಿಯು ರಾಜ್ಯ ಸರ್ಕಾರಕ್ಕೆ ನೀರಿನ ದರ ಹೆಚ್ಚಳ ಸಂಬಂಧ ಪ್ರಸ್ತಾವನೆ ಸಲ್ಲಿಸಿದೆ. 9 ವರ್ಷಗಳ ಬಳಿಕ ಬೆಂಗಳೂರಿನಲ್ಲಿ ನೀರಿನ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆಯಲ್ಲಿ ಕೋರಿದೆ. ಈಗಾಗಲೇ 2 ವರ್ಷಗಳ ಹಿಂದೆಯೇ ಸರ್ಕಾರಕ್ಕೆ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿದ್ದರೂ ಕೊರೊನಾ ಕಾರಣದಿಂದಾಗಿ ರಾಜ್ಯ ಸರ್ಕಾರ ಒಪ್ಪಿರಲಿಲ್ಲ ಎಂದು ಬೆಂಗಳೂರು ಜಲ ಮಂಡಳಿಯ ಪ್ರಧಾನ ಮುಖ್ಯ ಅಭಿಯಂತರ ಬಿ ಸುರೇಶ್ ತಿಳಿಸಿದರು.
ಬೆಂಗಳೂರು ಜಲಮಂಡಳಿಯು ನೀರಿನ ನಿರ್ವಹಣಾ ವೆಚ್ಚದ ಕಾರಣ ನೀಡಿ ದರ ಹೆಚ್ಚಳದ ಪ್ರಸ್ತಾವನೆಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಗೃಹ ಬಳಕೆಯ ನೀರಿನ ದರವನ್ನು ಶೇ 16ರಷ್ಟು ಹಾಗೂ ವಾಣಿಜ್ಯ ಬಳಕೆಯ ನೀರಿನ ದರವನ್ನು ಶೇ 21ರಷ್ಟು ಹೆಚ್ಚಳ ಮಾಡುವಂತೆ ಕೋರಿದೆ. ಪ್ರತಿ ವರ್ಷ ದರ ಏರಿಕೆಯ ಅಧಿಕಾರವನ್ನು ಇನ್ಮುಂದೆ ನಮಗೆ ನೀಡಬೇಕೆಂಬ ಪ್ರಸ್ತಾವನೆಯಲ್ಲಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.
ಇದನ್ನೂ ಓದಿ: ವಾರಂಟಿ ಇದ್ರೂ ಸೇವೆ ನೀಡದ ಸ್ಯಾಮ್ಸಂಗ್ ಸಂಸ್ಥೆ: ಕೋರ್ಟ್ನಲ್ಲಿ ಗೆದ್ದು ಪರಿಹಾರ ಪಡೆದ ಬೆಂಗಳೂರಿನ ಗ್ರಾಹಕ