ಬೆಂಗಳೂರು : ಸಿಎಂ ನಿವಾಸದೆದುರು ಗಾಂಜಾ ಮಾರಾಟ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದ ಇಬ್ಬರು ಕಾನ್ಸ್ಟೇಬಲ್ ಬಂಧನ ಪ್ರಕರಣದ ಬಳಿಕ ನಗರ ಪೊಲೀಸ್ ಇಲಾಖೆಯು ಗಣ್ಯರ ಮನೆಗಳ ಭದ್ರತೆಗೆ ದಕ್ಷ, ನಿಷ್ಠಾವಂತ, ಪ್ರಾಮಾಣಿಕ ಸಿಬ್ಬಂದಿ ಆಯ್ಕೆ ಮಾಡಿ ಕಳುಹಿಸುವಂತೆ ಇಲಾಖೆಯ ಅಧಿಕಾರಿಗಳಿಗೆ ಸಂದೇಶ ರವಾನಿಸಿದೆ.
ಸಿಎಂ, ರಾಜ್ಯಪಾಲರು, ಗೃಹ ಸಚಿವರು, ನ್ಯಾಯಾಧೀಶರ ಮನೆಗಳಿಗೆ ಭದ್ರತೆಗೆ ಸಿಬ್ಬಂದಿ ನಿಯೋಜನೆ ವೇಳೆ ಇನ್‌ಸ್ಪೆಕ್ಟರ್, ಸಬ್ ಇನ್‌ಸ್ಪೆಕ್ಟರ್ ಎಚ್ಚರ ವಹಿಸಬೇಕೆಂದು ನಗರ ಆಗ್ನೇಯ ವಿಭಾಗದ ಡಿಸಿಪಿ ತಮ್ಮ ಅಧಿಕಾರಿಗಳಿಗೆ ಸಂದೇಶ ಕಳುಹಿಸಿದ್ದಾರೆ.
ಗಣ್ಯರ ಮನೆಗೆ ನಿಯೋಜನೆ ಮಾಡುವ ಸಿಬ್ಬಂದಿ ಪ್ರಾಮಾಣಿಕರಾಗಿರಬೇಕು. ಸಿಬ್ಬಂದಿ ವಿರುದ್ಧ ಯಾವುದೇ ಕೇಸ್ ಇರಬಾರದು. ಕುಡಿಯುವ ಚಟಕ್ಕೆ ಬಿದ್ದವರು, ಮಾನಸಿಕ ಅಸಮತೋಲನ ಹೊಂದಿದವರನ್ನು ನಿಯೋಜಿಸಬಾರದು. ಕ್ಲೀನ್ ಹ್ಯಾಂಡ್ ಇರುವ ಅಧಿಕಾರಿಗಳು ಹಾಗೂ ಸಿಬ್ಬಂದಿ ನಿಯೋಜನೆಗೆ ಸೂಚನೆ ನೀಡಿದ್ದಾರೆ.
ಇದನ್ನೂ ಓದಿ: ಸಿಎಂ ಮನೆ ಮುಂದೆ ಪೊಲೀಸರಿಂದ ಗಾಂಜಾ ಮಾರಾಟ ಪ್ರಕರಣ: ತನಿಖೆ ಸಿಸಿಬಿಗೆ ಹಸ್ತಾಂತರ
ಕೋರಮಂಗಲ ಪೊಲೀಸರಿಂದ ಸಿಎಂ ಮನೆ ಮುಂದೆ ಗಾಂಜಾ ಮಾರಾಟ ಪ್ರಕರಣ ಆದ ನಂತರ ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಮಹದೇವನ್ಗೆ ಶೋಕಾಸ್ ನೋಟಿಸ್ ನೀಡಲಾಗಿತ್ತು. ನೋಟಿಸ್ ನಂತರ ಎಚ್ಚೆತ್ತ ಡಿಸಿಪಿ ತಮ್ಮ ವಿಭಾಗದ ಅಧಿಕಾರಿ ಮತ್ತು ಸಿಬ್ಬಂದಿಗೆ ಈ ರೀತಿ ಸಂದೇಶ ರವಾನಿಸಿದ್ದಾರೆ. ಇದೇ ಗಾಂಜ ಕೇಸ್ನಲ್ಲಿ ಆರ್.ಟಿ. ನಗರದ ಇನ್‌ಸ್ಪೆಕ್ಟರ್ ಅಶ್ವತ್ಥ್ ಗೌಡ ಹಾಗೂ ಸಬ್ ಇನ್‌ಸ್ಪೆಕ್ಟರ್ ವೀರಭದ್ರ ಅವರ ಸಸ್ಪೆಂಡ್ ಕೂಡ ಆಗಿತ್ತು.
ಜಾಹೀರಾತು: ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ