ಬೆಂಗಳೂರು: ಕೊರೊನಾ ಕೇಕೆ ಪ್ರತಿದಿನ ಹೆಚ್ಚುತ್ತಲೇ ಇದೆ. ಇದನ್ನರಿತ ಸರ್ಕಾರ ಕೂಡಾ ಎರಡನೆ ಅವಧಿಗೆ ಲಾಕ್ ಡೌನ್ ವಿಸ್ತರಿಸಿದೆ. ಇನ್ನು ಈ ವೇಳೆ ಜನರಿಗೆ ಅಗತ್ಯ ವಸ್ತುಗಳಿಗಾಗಿ ಸರ್ಕಾರ ಹಾಗೂ ಪೊಲೀಸ್ ಇಲಾಖೆ ಕೊಂಚ ವಿನಾಯಿತಿ ತೋರಿದೆ. ಆದರೆ ಅದನ್ನೇ ದುರುಪಯೋಗಮಾಡಿಕೊಂಡಿರುವ ಬೆಂಗಳೂರಿನ ಜನರು ಅನಗತ್ಯವಾಗಿ ರಸ್ತೆಗೆ ಇಳಿದಿದ್ದಾರೆ.
ನಿನ್ನೆ ಬೆಂಗಳೂರಿನಲ್ಲಿ ಕೊರೊನಾಗೆ ಮೊದಲ ಬಲಿಯಾಗಿರುವುದು ಒಂದು ಕಡೆ ಆತಂಕ ನಿರ್ಮಾಣವಾಗಿದೆ. ಇನ್ನು ಬೆಂಗಳೂರಿನಲ್ಲಿ 83 ಕೊರೊನಾ ಪಾಸಿಟಿವ್ ಕೇಸ್ಗಳಿದ್ದು ,ಇದು ರಾಜ್ಯದಲ್ಲೇ ಅಧಿಕ ಕೇಸ್ ಪತ್ತೆಯಾದ ಜಿಲ್ಲೆಯಾಗಿದೆ. ಬೆಂಗಳೂರು ರೆಡ್ ಝೋನ್ ಆಗಿದ್ದು, ಕೊರೊನಾ ಹಾಟ್ ಸ್ಪಾಟ್ ಆಗಿದೆ. ಇದರ ನಡುವೆ ಜನರು ಬೇಜವಾಬ್ದಾರಿತನ ತೋರಿಸಿ ಅಗತ್ಯ ಇಲ್ಲದಿದ್ದರೂ ರಸ್ತೆಗೆ ಇಳಿಯುತ್ತಿದ್ದಾರೆ. ಅದರಲ್ಲೂ ಬೆಂಗಳೂರು ದಕ್ಷಿಣ ವಲಯದಲ್ಲಿ ಅಗತ್ಯ ವಸ್ತುಗಳನ್ನು ಉಚಿತವಾಗಿ ಮನೆಗೆ ಡೆಲಿವರಿ ಕೊಡುವ ಆ್ಯಪನ್ನು ಸರ್ಕಾರ ಲಾಂಚ್ ಮಾಡಿದ್ದರೂ ಕೂಡಾ ಜನರು ಸುಖಾ ಸುಮ್ಮನೆ ರಸ್ತೆಯಲ್ಲಿ ಓಡಾಡಿಕೊಂಡು ಪೊಲೀಸರಿಗೆ ಆಂತಕ ಉಂಟುಮಾಡಿದ್ದಾರೆ.
ಪೊಲೀಸರು ಪಾಸ್ ಇಲ್ಲದ ವಾಹನಗಳನ್ನು ಜಪ್ತಿ ಮಾಡುತ್ತಿದ್ದರೂ ಜನರು ಕ್ಯಾರೆ ಎನ್ನುತ್ತಿಲ್ಲ. ಬೆಂಗಳೂರು ಪೊಲೀಸರು ರಾಷ್ಟ್ರೀಯ ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಈಗಾಗಲೇ 27 ಸಾವಿರ ವಾಹನಗಳನ್ನು ಜಪ್ತಿ ಮಾಡಿದ್ದರೂ ಕೂಡಾ ಜನರು ಮಾತ್ರ ಬುದ್ಧಿ ಕಲಿಯುತ್ತಿಲ್ಲ. ಸರ್ಕಾರ ಮತ್ತು ಪೊಲೀಸ್ ಇಲಾಖೆ ಹಗಲು ರಾತ್ರಿ ಕಷ್ಟ ಪಟ್ಟು ಕೊರೊನಾವನ್ನು ತೊಲಗಿಸಲು ಕೆಲಸ ಮಾಡುತ್ತಿದ್ದರೂ ಜನರು ಮಾತ್ರ ಸರ್ಕಾರದ ಮಾತು ಕೇಳದೆ ಇರುವುದು ಬೇಸರ ತರಿಸಿದೆ. ರಾಜ್ಯದಲ್ಲಿ ಇಷ್ಟೆಲ್ಲಾ ನಡೆಯುತ್ತಿದ್ದರೂ ಜನರು ಮಾತ್ರ ನಮಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನುವಂತೆ ಇರುವುದು ನಿಜಕ್ಕೂ ವಿಪರ್ಯಾಸ.