ಬೆಂಗಳೂರು : ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದರೂ ತಿಂಡಿ ತಿನಿಸುಗಳ ದರ ಹೆಚ್ಚಳದ ಬರೆ ಗ್ರಾಹಕರಿಗಿಲ್ಲ ಎಂದು ಬೃಹತ್ ಬೆಂಗಳೂರು ಹೋಟೆಲುಗಳ ಸಂಘ ತಿಳಿಸಿದೆ.
ಹೋಟೆಲ್ ಉದ್ಯಮಕ್ಕೆ ನಷ್ಟ : ಈ ಕುರಿತು ಮಾತನಾಡಿರುವ ಬೆಂಗಳೂರು ಹೋಟೆಲುಗಳ ಸಂಘದ ಕಾರ್ಯದರ್ಶಿ ಪಿ ಸಿ ರಾವ್, ತೈಲ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದೆ. ಈ ರೀತಿ ಇಂಧನದ ಬೆಲೆ ಏರುತ್ತಿರುವುದರಿಂದ ಎಲ್ಲ ಅಗತ್ಯ ವಸ್ತುಗಳು, ತರಕಾರಿ, ಧವಸ ಧಾನ್ಯಗಳ ಬೆಲೆ ಕೂಡ ಬಹಳಷ್ಟು ಹೆಚ್ಚುತ್ತಿದೆ.
ಇದರ ಜೊತೆಗೆ ಹೋಟೆಲ್ ಉದ್ಯಮದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಉಪಯೋಗಿಸುವ ಗ್ಯಾಸ್ ಸಿಲಿಂಡರ್ ಬೆಲೆಯೂ ಕೂಡ ಏರಿದೆ. ಈ ರೀತಿಯ ಬೆಲೆ ಏರಿಕೆಯಿಂದ ಹೋಟೆಲ್ ಉದ್ಯಮಕ್ಕೆ ಬಹುದೊಡ್ಡ ಹೊಡೆತ ಬೀಳುತ್ತಿದೆ ಎಂದು ತಿಳಿಸಿದ್ದಾರೆ.
ಗ್ರಾಹಕರ ಹಿತದೃಷ್ಟಿಯಿಂದ ಬೆಲೆ ಏರಿಕೆ ಇಲ್ಲ : ಗ್ರಾಹಕರ ಹಿತದೃಷ್ಟಿಯಿಂದ ತಿಂಡಿ, ಊಟದ ಬೆಲೆಯನ್ನು ಹತೋಟಿಯಲ್ಲಿಟ್ಟುಕೊಂಡು ಬೆಲೆ ಏರಿಸುವುದನ್ನು ತಾತ್ಕಾಲಿಕವಾಗಿ ಮುಂದೂಡುತ್ತೇವೆ ಎಂದು ಹೇಳಿದ್ದಾರೆ.
ಸರ್ಕಾರದ ಗಮನವಿರಲಿ : ಸರ್ಕಾರ ತಕ್ಷಣ ಈ ಬೆಲೆ ಏರಿಕೆಯ ಕಡೆ ಗಮನ ಹರಿಸಬೇಕು. ಉದ್ಯೋಗಿಯಾಗಿ ಉದ್ಯೋಗ ಕೊಡುತ್ತಿರುವ ಎಲ್ಲ ಹೋಟೆಲ್ ಮಾಲೀಕರ ಕೆಲವೊಂದು ಬೇಡಿಕೆಗಳ ಕಡೆ ಗಮನ ಹರಿಸಬೇಕು.
ಸರ್ಕಾರ ಮುಂದಿನ ದಿನಗಳಲ್ಲಿ ಬೆಲೆ ಏರಿಕೆಯನ್ನು ನಿಯಂತ್ರಿಸದಿದ್ದಲ್ಲಿ ನಾವು ಅನಿವಾರ್ಯವಾಗಿ ತಿಂಡಿ, ತಿನಿಸುಗಳ ಬೆಲೆಯನ್ನು ಹೆಚ್ಚಿಸಬೇಕಾಗಬಹುದು ಎಂದು ಬೆಂಗಳೂರು ಹೋಟೆಲುಗಳ ಸಂಘ ಎಚ್ಚರಿಕೆ ಸಂದೇಶ ರವಾನಿಸಿದೆ.
ಇದನ್ನೂ ಓದಿ: ಚನ್ನಮ್ಮ ವೃತ್ತದ ಫ್ಲೈಓವರ್ ನಿರ್ಮಾಣ ಕಾಮಗಾರಿ.. ಸಾರ್ವಜನಿಕರ ಸಲಹೆ ಆಧರಿಸಿ ವರದಿ ಸಿದ್ಧಪಡಿಸಿದ ಸಮಿತಿ