ಬೆಂಗಳೂರು : ರಾಜ್ಯದಲ್ಲಿ ಕೊರೊನಾ ಹರಡುವಿಕೆ ನಿಯಂತ್ರಿಸುವ ಸಲುವಾಗಿ ಸರ್ಕಾರ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ. ಆದರೆ, ವೀಕೆಂಡ್ ಕರ್ಫ್ಯೂ ಹೆಸರಿನಲ್ಲಿ ಬೆಂಗಳೂರಿನಿಂದ ತಮ್ಮೂರಿನತ್ತ ಕೆಲವರು ತೆರಳುತ್ತಿದ್ದು, ಸೋಂಕು ಹರಡುವ ಭೀತಿ ಹೆಚ್ಚಾಗಿದೆ.
ಮೊದಲೆರಡು ಕೊರೊನಾ ಅಲೆಯಲ್ಲಿ ಮಾಡಿದ ತಪ್ಪನ್ನು ಮತ್ತೆ ರಿಪೀಟ್ ಮಾಡುತ್ತಿದ್ದು, ಬೆಂಗಳೂರಿನಿಂದ ತೆರಳುವ ಜನರೇ ಸೂಪರ್ ಸ್ಪ್ರೆಡರ್ಸ್ ಆಗ್ತಿದ್ದಾರೆ. ಎರಡು ದಿನ ರಜೆ ಸಿಕ್ತು ಅಂತಾ ಹಲವರು ತಮ್ಮೂರಿಗೆ ತೆರಳಿದ್ದಾರೆ.
ಈಗಾಗಲೇ ಬೆಂಗಳೂರೊಂದರಲ್ಲೇ ಸಕ್ರಿಯ ಪ್ರಕರಣಗಳು ಹೆಚ್ಚಾಗಿದ್ದು, ರೆಡ್ ಅಲರ್ಟ್ನಲ್ಲಿದೆ. ಹೀಗಿರುವಾಗ ಬೆಂಗಳೂರಿನಿಂದ ಹಳ್ಳಿಗಳಿಗೆ ತೆರಳಿದರೆ ಕೊರೊನಾ ಹಬ್ಬುವಿಕೆ ವೇಗ ಪಡೆಯಲಿದೆ.
ಕೊರೊನಾ ಮೊದಲ ಮತ್ತು ಎರಡನೆಯ ಅಲೆಯಲ್ಲಿ ಇದೇ ರೀತಿ ಗುಳೆ ಹೋಗಿ ಬೆಂಗಳೂರಿನಲ್ಲಿ ಮಾತ್ರ ಹೆಚ್ಚಿದ್ದ ಕೊರೊನಾ ಇಡೀ ರಾಜ್ಯಾದ್ಯಂತ ವ್ಯಾಪಿಸಿತ್ತು. ಹೀಗಾಗಿ, ವೈದ್ಯರು ಕೂಡ ಆತಂಕ ವ್ಯಕ್ತಪಡಿಸಿದ್ದು, ಬೆಂಗಳೂರಿನಲ್ಲಿರುವವರು ಅನವಶ್ಯಕವಾಗಿ ತಮ್ಮೂರಿಗೆ ಹೋಗಬೇಡಿ ಅಂತಾ ಸಲಹೆ ನೀಡಿದ್ದಾರೆ.
ಈ ಕುರಿತು ಮಾತಾನಾಡಿರುವ ಏಸ್ ಸುಹಾಸ್ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಡಾ. ಜಗದೀಶ್ ಹಿರೇಮಠ್ ಮಾತನಾಡಿದ್ದು, ಕೋವಿಡ್ ಮೂರನೇ ಅಲೆ ಈಗಾಗಲೇ ಬಂದಾಗಿದೆ. ಜನರು ಎಚ್ಚರಿಕೆಯಲ್ಲಿ ಇರಬೇಕು. ಮುಖ್ಯವಾಗಿ ಕೋವಿಡ್ ನಿಯಮಗಳನ್ನು ತಪ್ಪದೇ ಪಾಲಿಸಬೇಕು ಅಂತಾ ಸಲಹೆ ನೀಡಿದ್ದಾರೆ. ಸರ್ಕಾರ ನೈಟ್ ಕರ್ಫ್ಯೂ ಹಾಗೂ ವೀಕೆಂಡ್ ಕರ್ಫ್ಯೂ ಜಾರಿ ಮಾಡಿದೆ.
ಆದರೆ, ಹಲವರು ಕರ್ಫ್ಯೂ ಜಾರಿ ಮಾಡಿದರೆ ವೈರಸ್ ಹೋಗಿ ಬಿಡುತ್ತಾ ಅಂತೆಲ್ಲ ವ್ಯಂಗ್ಯದ ಪ್ರಶ್ನೆಗಳನ್ನು ಕೇಳ್ತಾರೆ. ಕರ್ಫ್ಯೂ ಜಾರಿ ಮಾಡುವ ಉದ್ದೇಶ ಜನ ಸಂದಣಿ ತಪ್ಪಿಸುವುದಾಗಿದೆ. ಹೊರೆಗೆ ಹೆಚ್ಚು ಓಡಾಡದಂತೆ, ಗುಂಪು ಗೂಡದಂತೆ ಈ ಕ್ರಮಕೈಗೊಳ್ಳಲಾಗುತ್ತಿದೆ. ಆದರೆ, ಸಾಕಷ್ಟು ಜನರು ಕರ್ಫ್ಯೂ ಜಾರಿ ಮಾಡಿದ್ರೆ ಊರುಗಳಿಗೆ ತೆರಳುತ್ತಾರೆ. ಅಲ್ಲಿ ಹೋಗಿ ಕೊರೊನಾ ಹರಡಿಸುವ ಕೆಲಸ ಮಾಡುತ್ತಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಕೋವಿಡ್ ಪರಿಸ್ಥಿತಿ ಹೇಗಿದೆ? ಚಿಕಿತ್ಸೆಗೆ ಆಸ್ಪತ್ರೆಗಳಲ್ಲಿ ಹಾಸಿಗೆ ಲಭ್ಯವಿದೆಯಾ?
ಎರಡನೇ ಅಲೆಯ ಸಂದರ್ಭದಲ್ಲಿ ಇಂತಹ ಪರಿಸ್ಥಿತಿ ಎದುರಾಗಿತ್ತು. ಶುಕ್ರವಾರ ಸಂಜೆಯೇ ಊರುಗಳಿಗೆ ಹೋಗಿ ಕೊರೊನಾ ಅಬ್ಬಿಸೋ ಕೆಲಸ ಆಗಿತ್ತು. ಮತ್ತೆ ಆ ಕೆಲಸ ಮಾಡಬೇಡಿ ಅಂತಾ ವೈದ್ಯ ಜಗದೀಶ್ ಹಿರೇಮಠ್ ಸಲಹೆ ನೀಡಿದ್ದಾರೆ. ನಿಮ್ಮ ನಿಮ್ಮ ಮನೆಯಲ್ಲಿ ಜಾಗೃತರಾಗಿರಿ, ಕೊರೊನಾ ನಿಯಮ ಪಾಲಿಸಿ ಅಂತಾ ಮನವಿ ಮಾಡಿದ್ದಾರೆ.