ಬೆಂಗಳೂರು: ಬಿಡಿಎ ಮಂಗಳವಾರ ಇಂದಿರಾನಗರದಲ್ಲಿ ಸುಮಾರು 20 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡಿದೆ. ಇಂದಿರಾನಗರ 2 ನೇ ಹಂತದಲ್ಲಿನ ಬಿನ್ನಮಂಗಲದ ಸರ್ವೆ ಸಂಖ್ಯೆ 13 ಬಿಡಿಎಗೆ ಸೇರಿದ್ದ 11 ಗುಂಟೆ ಜಾಗವನ್ನು ಒತ್ತುವರಿದಾರರಿಂದ ಬಿಡಿಸಿ ಕೊಳ್ಳಲಾಗಿದೆ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.
ಇಂದಿರಾನಗರ 2 ನೇ ಹಂತದಲ್ಲಿನ ಬಿನ್ನಮಂಗಲದಲ್ಲಿ ಖಾಸಗಿಯವರು ಮೂರು ಶೆಡ್ಗಳನ್ನು ಹಾಕಿಕೊಂಡು ಜಾಗವನ್ನು ಒತ್ತುವರಿ ಮಾಡಿಕೊಂಡಿದ್ದರು. ಈ ಬಗ್ಗೆ ಬಿಡಿಎ ಹಲವು ಬಾರಿ ಎಚ್ಚರಿಕೆ ನೀಡಿದ್ದರೂ ಜಾಗವನ್ನು ತೆರವುಗೊಳಿಸಿರಲಿಲ್ಲ. ಖಾಸಗಿ ಒತ್ತುವರಿದಾರರು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದರಾದರು. ಆದರೆ, ಸುಪ್ರೀಂಕೋರ್ಟ್ ಬಿಡಿಎ ಪರ ತೀರ್ಪು ನೀಡಿತ್ತು ಹೀಗಾಗಿ ವಶ ಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಬಿಡಿಎ ವಿಶೇಷ ಕಾರ್ಯಪಡೆಯ ಪೊಲೀಸ್ ಅಧಿಕಾರಿಗಳಾದ ಭಾಸ್ಕರ್, ರವಿಕುಮಾರ್ ಮತ್ತು ಲಕ್ಷ್ಮಯ್ಯ ಹಾಗೂ ಕಾರ್ಯಪಾಲಕ ಅಭಿಯಂತರ ಮಹದೇವಗೌಡ ನೇತೃತ್ವದ ಬಿಡಿಎ ಅಧಿಕಾರಿಗಳು ಮತ್ತು ಸಿಬ್ಬಂದಿ ತಂಡ ತಾತ್ಕಾಲಿಕ ಶೆಡ್ಗಳನ್ನು ತೆರವುಗೊಳಿಸಿ ಜಾಗವನ್ನು ಬಿಡಿಎ ವಶಕ್ಕೆ ಪಡೆದುಕೊಂಡಿದೆ. ಈ 11 ಗುಂಟೆ ಜಾಗದ ಮಾರುಕಟ್ಟೆ ಮೌಲ್ಯ ಸುಮಾರು 18 ಕೋಟಿ ರೂಪಾಯಿಗಳಾಗಿದೆ ಎಂದಿದ್ದಾರೆ.
ಲೀಲಾ ಹಿಂಭಾಗ ಒತ್ತುವರಿ ಜಾಗ ತೆರವು: ಲೀಲಾ ಪ್ಯಾಲೇಸ್ ಹೊಟೇಲ್ ಹಿಂಭಾಗ ಬಿಡಿಎಗೆ ಸೇರಿದ 1,600 ಚದರಡಿ ಜಾಗದಲ್ಲಿ ಹೊಟೇಲ್ನವರು ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಿದ್ದರು. ಇದನ್ನು ತೆರವುಗೊಳಿಸುವಂತೆ ಸೂಚಿಸಿದ್ದರೂ ಹೊಟೇಲ್ನವರು ಕಾಂಪೌಂಡ್ ತೆರವುಗೊಳಿಸಿರಲಿಲ್ಲ. ಜೆಸಿಬಿಗಳ ನೆರವಿನಿಂದ ಕಾಂಪೌಂಡ್ನ್ನು ನೆಲಸಮಗೊಳಿಸಿ. ಈ ಜಾಗವನ್ನು ಬಿಡಿಎ ವಶಕ್ಕೆ ತೆಗೆದುಕೊಳ್ಳಲಾಗಿದೆ. ಇದರ ಮೌಲ್ಯ ಸುಮಾರು 2 ಕೋಟಿ ರೂಪಾಯಿಗಳಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಬಿಡಿಎ ಗೆ ಹೆಚ್ಚಿನ ಆದಾಯ: ಬಿಡಿಎಗೆ ಸೇರಿದ ಸ್ವತ್ತನ್ನು ಪತ್ತೆ ಮಾಡುವ ಕಾರ್ಯ ಮತ್ತು ಅಂತಹ ಜಾಗಗಳನ್ನು ಸ್ವಾಧೀನಪಡಿಸಿಕೊಳ್ಳುವ ಪ್ರಕ್ರಿಯೆ ನಿರಂತರವಾಗಿ ಸಾಗಿದೆ. ಹೀಗೆ ಸ್ವಾಧೀನಕ್ಕೆ ಪಡೆದುಕೊಂಡ ಆಯ್ದ ಜಾಗಗಳನ್ನು ಸಾರ್ವಜನಿಕರಿಗೆ ವಿತರಣೆ ಮಾಡಲಾಗುತ್ತದೆ. ಇದರಿಂದ ಬಿಡಿಎಗೆ ಹೆಚ್ಚಿನ ಆದಾಯ ಬರಲಿದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.
ಇದನ್ನೂ ಓದಿ: ಆದೇಶ ಪಾಲಿಸದ ಅಧಿಕಾರಿಗಳ ಜೈಲಿಗಟ್ಟಬೇಕು.. ಐಎಎಸ್ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಕಿಡಿ