ಬೆಂಗಳೂರು: ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲು ಜಾಗವಿಲ್ಲ. ಪ್ಲೀಸ್ ಮನೆಯಿಂದ ಹೊರಗೆ ಬರಬೇಡಿ ಎಂದು ಆ್ಯಂಬುಲೆನ್ಸ್ ಚಾಲಕನೋರ್ವ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾನೆ.
ವೃತ್ತಿಯಲ್ಲಿ ಆ್ಯಂಬುಲೆನ್ಸ್ ಚಾಲಕರಾಗಿರುವ ಡ್ಯಾನಿಲ್ ಎಂಬುವರು ಕೆಲ ವರ್ಷಗಳಿಂದ ಮಾನವೀಯ ಕೆಲಸದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ನಗರದಲ್ಲಿ ಎಲ್ಲಿಯಾದರೂ ಅನಾಥ ಶವಗಳು ಕಂಡು ಬಂದರೆ ಅವುಗಳ ಅಂತ್ಯಕ್ರಿಯೆಯನ್ನು ಇವರೇ ನೆರವೇರಿಸುತ್ತಾರೆ. ಸದ್ಯ ಕೊರೊನಾದ ಈ ಸಂದಿಗ್ಧ ಪರಿಸ್ಥಿತಿಯಲ್ಲೂ ತಮ್ಮ ಕಾರ್ಯವನ್ನು ಮುಂದುವರೆಸಿದ್ದಾರೆ. ಡ್ಯಾನಿಲ್ ಇದುವರೆಗೂ 30 ಸಾವಿರಕ್ಕೂ ಹೆಚ್ಚು ಶವಗಳಿಗೆ ಮುಕ್ತಿ ಕಾಣಿಸಿದ್ದಾರೆ.
'ಕಲ್ಲಪಲ್ಲಿ ರುದ್ರಭೂಮಿಯು ಮೂರು ಎಕರೆ ಜಾಗದಲ್ಲಿ ಕೊರೊನಾ ಬರುವ ಮುನ್ನ ಸ್ಮಶಾನ ಖಾಲಿಯಿತ್ತು. ಸಾವಿನ ಸಂಖ್ಯೆ ಹೆಚ್ಚಾದಂತೆ ಹೂಳಲು ಜಾಗವಿಲ್ಲದೆ ಸ್ಮಶಾನ ತುಂಬಿ ಹೋಗಿದೆ. ದಯಾಮಾಡಿ ಮನೆಯಿಂದ ಯಾರು ಹೊರಬರಬೇಡಿ' ಎಂದು ಸ್ಮಶಾನದ ಕರಾಳ ಸತ್ಯ ತೋರಿಸಿ ಜನರಲ್ಲಿ ಡ್ಯಾನಿಲ್ ಮನವಿ ಮಾಡಿದ್ದಾರೆ.
ಎರಡನೇ ಅಲೆ ಪ್ರಾರಂಭವಾದ ಬಳಿಕ 60ಕ್ಕೂ ಹೆಚ್ಚು ಮೃತದೇಹ ಅಂತ್ಯಕ್ರಿಯೆ ನಡೆಸಿರುವ ಈ ಆ್ಯಂಬುಲೆನ್ಸ್ ಚಾಲಕ, ಪ್ರತಿನಿತ್ಯ ನಾಲ್ಕೈದು ಶವಗಳನ್ನು ಅಂತ್ಯಕ್ರಿಯೆ ಮಾಡುತ್ತಿದ್ದಾರೆ. ಖುದ್ದು ಸ್ಮಶಾನಕ್ಕೆ ತೆರಳಿ ಅಲ್ಲಿನ ನೈಜ ಪರಿಸ್ಥಿತಿಯನ್ನು ವಿವರಿಸಿದ್ದಾರೆ. ಕೈ ಮುಗಿದು ಸ್ಮಶಾನದ ಚಿತ್ರಣ ತೋರಿಸಿ ಮನೆಯಲ್ಲಿಯೇ ಇದ್ದು ಆರೋಗ್ಯ ಕಾಪಾಡಿಕೊಳ್ಳುವಂತೆ ಜನರಿಗೆ ತಿಳಿ ಹೇಳಿದ್ದಾರೆ.