ಬೆಂಗಳೂರು: ಐತಿಹಾಸಿಕ ದೊಡ್ಡ ಆಲದ ಮರದ ಸಂರಕ್ಷಣೆಗೆ ಸಂಬಂಧಿಸಿದಂತೆ ಇಂದು ದೊಡ್ಡ ಆಲದ ಮರದ ಸಂರಕ್ಷಣಾ ಸಮಿತಿಯ ತಜ್ಞರು ಭೇಟಿ ನೀಡಿದರು. ಇದೇ ವೇಳೆ ವಾಸ್ತವ ಚಿತ್ರಣವನ್ನು ಪರಾಮರ್ಶಿಸಿ ಸಲಹೆ - ಸೂಚನೆಗಳನ್ನು ನೀಡಿದರು. ದೊಡ್ಡಾಲದ ಮರದ ಸಂರಕ್ಷಣಾ ಸಮಿತಿಯ ಅಧ್ಯಕ್ಷ ಡಾ. ಎ.ಎನ್.ಯಲಪ್ಪ ರೆಡ್ಡಿ, ಬಟಾನಿಕಲ್ ಸರ್ವೆ ಆಫ್ ಇಂಡಿಯಾ ನಿರ್ದೇಶಕ ಡಾ.ಸಂಜಪ್ಪ ಸೇರಿದಂತೆ ತೋಟಗಾರಿಕೆ ಇಲಾಖೆಯ ಅಧಿಕಾರಿಗಳು ಭಾಗಿಯಾಗಿದರು.
400 ವರ್ಷಗಳಷ್ಟು ಹಳೆಯದಾದ ಬೆಂಗಳೂರಿನ ಐತಿಹಾಸಿಕ ದೊಡ್ಡ ಆಲದ ಮರ ದೇಶದ 6ನೇ ಅತೀ ದೊಡ್ಡ ಆಲದ ಮರವೆಂಬ ಹೆಗ್ಗಳಿಕೆ ಹೊಂದಿದೆ. ಪ್ರಸ್ತುತ ದೊಡ್ಡ ಆಲದ ಮರದ ವಿಸ್ತೀರ್ಣ ಸುಮಾರು 3 ಎಕರೆ ಇವೆ. ದೊಡ್ಡ ಆಲದ ಮರದಲ್ಲಿ ಒಟ್ಟು 1,359 ಬೀಳಲು ಬೇರುಗಳಿದ್ದು, ಈ ಪೈಕಿ 811 ಸಂಖ್ಯೆಯ ಬೀಳಲು ಬೇರುಗಳು ನೆಲಕ್ಕೆ ಬೇರು ಕೊಟ್ಟಿವೆ. ಉಳಿದ 548 ಸಂಖ್ಯೆಯ ಬೀಳಲು ಬೇರುಗಳು ನೆಲದಿಂದ 10-20 ಅಡಿ ಎತ್ತರದಲ್ಲಿ, ತೂಗುತ್ತಿವೆ.
ಕಳೆದ ಭಾನುವಾರ ರಾತ್ರಿ ಸುಮಾರು 7.00 ಗಂಟೆ ಸಮಯದಲ್ಲಿ, ಬಿದ್ದ ಭಾರಿ ಮಳೆ-ಗಾಳಿಯಿಂದ ಒಂದು ಬೀಳಲು ಬೇರು ಸಮೂಹ ಬಿದ್ದು ಹೋಗಿದೆ. ಇದನ್ನ ಸಮಿತಿಯ ತಜ್ಞರು ಅಧಿಕಾರಿಗಳು, ಸ್ಥಳೀಯ ಗ್ರಾಮಸ್ಥರ ಸಮ್ಮುಖದಲ್ಲಿ ಪರಿಶೀಲಿಸಿ ವೈಜ್ಞಾನಿಕ ಅಂಶಗಳನ್ನು ತಿಳಿಸಿದ್ದಾರೆ. ಪ್ರಸ್ತುತ ಉರುಳಿ ಬಿದ್ದಿರುವ ಬೀಳಲು ಬೇರುಗಳ ಸಮೂಹ ಭಾರಿ ಮಳೆ ಗಾಳಿಯಿಂದ ಎಂದು ಸ್ಪಷ್ಟ ಪಡಿಸಿದ್ದು, ಈ ಬಗ್ಗೆ ಬೇರೆ ವದಂತಿಗಳನ್ನು ತಳ್ಳಿ ಹಾಕಿದೆ. ಹಾಲಿ ಉರುಳಿ ಬಿದ್ದಿರುವ ಬೀಳಲು ಬೇರುಗಳ ಕಾಂಡ ಸಮೂಹ ಪಕ್ಕದ ಬೇರು ಸಮೂಹಕ್ಕೆ ಹಾನಿ ಮಾಡುವುದನ್ನು ತಪ್ಪಿಸಲು ಬಿದ್ದಿರುವ ಬೇರು ಸಮೂಹವನ್ನು ತ್ವರಿತವಾಗಿ ಕತ್ತರಿಸಿ ತೆರವುಗೊಳಿಸುವಂತೆ ಸಲಹೆ ನೀಡಲಾಗಿದೆ.
ಮೇ ತಿಂಗಳಲ್ಲಿ 200ಕ್ಕೂ ಹೆಚ್ಚು ಮರಗಳು ಧರೆಗೆ: ಮೇ ತಿಂಗಳ ಆರಂಭದಿಂದ ಇಲ್ಲಿಯವರೆಗೆ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಹೆಚ್ಚು ಮಳೆ ಗಾಳಿಯಿಂದ 201 ಮರಗಳು ಬುಡ ಸಮೇತ ಉರುಳಿ ಬಿದ್ದಿದ್ದು, ಸುಮಾರು 845 ಕ್ಕೂ ಹೆಚ್ಚು ಮರಗಳ ರೆಂಬೆಗಳು ಮುಂದು ಬಿದ್ದಿವೆ. ಹಾಗೂ ದೇಶದ 3ನೇ ಅತಿದೊಡ್ಡ ತಮಿಳುನಾಡಿನ ಆಲದ ಮರದ ಕೆಲ ಭಾಗಗಳು ಸಹಾ ಇತ್ತೀಚಿನ ಮಳೆ ಗಾಳಿಯಿಂದ ಹಾನಿಗೀಡಾಗಿರುವುದನ್ನು ಪರಾಮರ್ಶಿಸಿ ಇಂತಹ ನೈಸರ್ಗಿಕ ಪರಿಸ್ಥಿತಿಯಲ್ಲಿ, ಮಳೆ ಮತ್ತು ಗಾಳಿಯ ತೀವ್ರತೆಗನುಗುಣವಾಗಿ ಯಾವುದೇ ಮರಗಳು ನೈಸರ್ಗಿಕವಾಗಿ ಹಾನಿಗೀಡಾಗುತ್ತವೆಂದು ಸಮಿತಿ ಅಭಿಪ್ರಾಯಪಟ್ಟಿದೆ.
ಇದನ್ನೂ ಓದಿ: ಶಿವಮೊಗ್ಗ ಹುಲಿ - ಸಿಂಹಧಾಮದ 'ರಾಮ' ಹುಲಿ ಸಾವು: ಐದಕ್ಕಿಳಿದ ವ್ಯಾಘ್ರರ ಸಂಖ್ಯೆ