ಬೆಂಗಳೂರು: ಲಾಕ್ ಡೌನ್ ಹತ್ತು ಹಲವು ರೀತಿಯಲ್ಲಿ ಜನರನ್ನು ಕಾಡುತ್ತಿದ್ದು, ಅದರಲ್ಲೂ ಎಲೆಕ್ಟ್ರಾನಿಕ್ ವಸ್ತು ಹಾಳಾದ, ಮನೆಯ ಮಾಲೀಕರ ಗೋಳು ಹೇಳ ತೀರದಾಗಿದೆ.
ಮನೆಯಲ್ಲಿ ಕೆಟ್ಟು ನಿಂತಿರುವ ಭಾರವಾದ ಎಲೆಕ್ಟ್ರಾನಿಕ್ ವಸ್ತುಗಳಾದ ಫ್ರಿಡ್ಜ್, ವಾಷಿಂಗ್ ಮಷಿನ್ ಹಾಗೂ ಏಸಿ ರಿಪೇರಿ ಮಾಡಲು ಯಾರೂ ಬರುತ್ತಿಲ್ಲ. ತೆಗೆದುಕೊಂಡು ಹೋಗೋಣ ಎಂದರೆ ಮಾಲೀಕರಿಗೆ ಸಾಧ್ಯವಾಗುತ್ತಿಲ್ಲ. ಅತ್ಯಂತ ಅಗತ್ಯದ ಹಾಗೂ ಅನಿವಾರ್ಯವಾಗಿ ಮಾರ್ಪಟ್ಟಿರುವ ಎಲೆಕ್ಟ್ರಾನಿಕ್ ಉಪಕರಣಗಳು ಲಾಕ್ ಡೌನ್ ವೇಳೆಯಲ್ಲಿ ಕೈ ಕೊಟ್ಟಿರುವುದು ನಗರದ ಹಲವು ಮನೆಯ ನಾಗರಿಕರನ್ನು ಕಂಗೆಡಿಸಿದೆ.
ಒಟ್ಟಾರೆ ವಿದ್ಯುತ್ ವ್ಯತ್ಯಯ ಅಥವಾ ಇನ್ನಿತರ ತಾಂತ್ರಿಕ ಕಾರಣಗಳಿಂದಾಗಿ ಈ ಮೇಲಿನ ಸಾಧನಗಳು ಅನಿರೀಕ್ಷಿತವಾಗಿ ಸುಟ್ಟು ಹೋಗಿದೆ. ವಾರಂಟಿ ಅವಧಿಯಲ್ಲಿ ಇರುವ ಕಾರಣಕ್ಕೆ ಇಲ್ಲವೇ ಕಂಪನಿಯ ಪ್ರತಿನಿಧಿಯೇ ಬಂದು ರಿಪೇರಿ ಮಾಡುವ ಅನಿವಾರ್ಯ ಇರುವ ಹಿನ್ನೆಲೆ ಜನ ತಮ್ಮ ಅಗತ್ಯದ ಎಲೆಕ್ಟ್ರಾನಿಕ್ ಉಪಕರಣಗಳನ್ನು ರಿಪೇರಿ ಮಾಡಿಸಿಕೊಳ್ಳಲಾಗದೇ ಹೋಗಿದ್ದಾರೆ. ಕೇಂದ್ರ ಸರ್ಕಾರ ಲಾಕ್ ಡೌನ್ ನಿಯಮಾವಳಿಗಳನ್ನು ಸಾಕಷ್ಟು ಸಡಿಲಗೊಳಿಸಿದೆ. ಆದರೆ ಓಡಾಟಕ್ಕೆ ಪಾಸ್ ಸಿಗದ ಹಿನ್ನೆಲೆ ಅನೇಕ ಕಂಪನಿಯ ಎಲೆಕ್ಟ್ರಾನಿಕ್ ಉಪಕರಣಗಳ ರಿಪೇರಿ ಗುತ್ತಿಗೆ ಪಡೆದವರು, ಸಕಾಲಕ್ಕೆ ತಮ್ಮ ವಾಹನಗಳೊಂದಿಗೆ ಅಗತ್ಯವಿರುವ ಗ್ರಾಹಕರ ಮನೆ ತಲುಪಲು ಸಾಧ್ಯವಾಗುತ್ತಿಲ್ಲ.
ದುಬಾರಿ ಬೆಲೆಯ ಎಲೆಕ್ಟ್ರಾನಿಕ್ ಉಪಕರಣಗಳು ಸ್ಥಳೀಯವಾಗಿ ರಿಪೇರಿ ಮಾಡಿಸಿಕೊಂಡು ನಂತರ ಕೈಕೊಟ್ಟರೆ ಕಂಪನಿಗಳು ಇದಕ್ಕೆ ನಾವು ಜವಾಬ್ದಾರರಾಗಿರುವುದಿಲ್ಲ ಎಂದು ತಿಳಿಸುತ್ತಿವೆ.
ಎಲ್ ಜಿ ಕಂಪನಿಯ 260 ಎಂ.ಎಲ್. ಸಾಮರ್ಥ್ಯದ ಫ್ರಿಡ್ಜ್ ಸುಟ್ಟಿರುವ ಗ್ರಾಹಕರೊಬ್ಬರು 15 ದಿನಗಳಿಂದ ಸಮಸ್ಯೆಗೆ ಒಳಗಾಗಿದ್ದು, ದೂರವಾಣಿ ಮೂಲಕ ಕಂಪನಿಯ ಗ್ರಾಹಕ ಸೇವಾ ಕೇಂದ್ರಕ್ಕೆ ಕರೆ ಮಾಡಿದರೆ ಸಂಸ್ಥೆಯ ಆಪ್ ಮೂಲಕ ಸಮಸ್ಯೆ ನೋಂದಣಿ ಮಾಡಿಕೊಳ್ಳಿ ಎಂದು ತಿಳಿಸಿದೆ. ನೋಂದಣಿ ಮಾಡಿಕೊಂಡ ನಂತರ ಕಂಪನಿ ಪ್ರತಿನಿಧಿ ಕರೆಮಾಡಿ ಸಮಸ್ಯೆ ಆಲಿಸಿದ್ದು, ರಿಪೇರಿಗೆ ಬರೋಕೆ ನಾವು ಸಿದ್ಧವಿದ್ದೇವೆ.
ಅಗತ್ಯವಿರುವ 30 ವಾಹನಗಳು ಕೂಡ ಸಿದ್ಧವಿದೆ. ಆದರೆ, ಪಾಸ್ ಸಿಗದ ಹಿನ್ನೆಲೆ ಸುಮ್ಮನೆ ಲಾಕ್ ಡೌನ್ ಮುಗಿಯುವವರೆಗೂ ಕಾಯಬೇಕಾಗಿದೆ. ದಯವಿಟ್ಟು ತಾಳ್ಮೆಯಿಂದ ಸಹಕರಿಸಿ ಎಂದು ಮನವಿ ಮಾಡಿದ್ದಾರೆ.