ಹೊಸಕೋಟೆ : ಕ್ಷೇತ್ರದಲ್ಲಿ ಎಂಟಿಬಿ ನಾಗರಾಜ್ ಸೋಲಿನ ನಂತರ ಇದೇ ಮೊದಲ ಬಾರಿಗೆ ಸಂಸದ ಬಚ್ಚೇಗೌಡ ಹಾಗು ಪುತ್ರ ಶಾಸಕ ಶರತ್ ಬಚ್ಚೇಗೌಡ ಒಂದೇ ವೇದಿಕೆ ಮೇಲೆ ಕಾಣಿಸಿಕೊಂಡಿದ್ದು ಅಚ್ಚರಿ ಹುಟ್ಟಿಸಿದೆ.
ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಶರತ್ ಬಚ್ಚೇಗೌಡ, ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಬಿಜೆಪಿ ಅಭ್ಯರ್ಥಿ ಎಂಟಿಬಿ ಅವರನ್ನು ಮಣಿಸಿದ್ದರು. ಈ ಸೋಲಿನಿಂದ ಕಂಗೆಟ್ಟಿದ್ದ ಎಂಟಿಬಿ, ಅಪ್ಪ-ಮಗನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಬಿಜೆಪಿ ನಾಯಕರನ್ನು ಒತ್ತಾಯಿಸಿದ್ದರು.
ಬಿಜೆಪಿ ಸಂಸದರಾಗಿದ್ದರೂ ಸಹ ಬಚ್ಚೇಗೌಡ, ಪಕ್ಷದ ಅಧಿಕೃತ ಅಭ್ಯರ್ಥಿ ಎಂಟಿಬಿ ನಾಗರಾಜ್ ಪರ ಪ್ರಚಾರ ಕಾರ್ಯ ನಡೆಸಿರಲಿಲ್ಲ. ಅಲ್ಲದೇ ಪಕ್ಷೇತರ ಅಭ್ಯರ್ಥಿಯಾಗಿದ್ದ ತಮ್ಮ ಪುತ್ರ ಶರತ್ ಬಚ್ಚೇಗೌಡರು ಪರವೂ ಪ್ರಚಾರ ಕಾರ್ಯದಲ್ಲಿ ಬಹಿರಂಗವಾಗಿ ಕಾಣಿಸಿಕೊಂಡಿರಲಿಲ್ಲ.
ಆದರೆ ಇದೀಗ ಹೊಸಕೋಟೆಯ ಗುಟ್ಟಳ್ಳಿಯಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಪ್ಪ, ಮಗ ಒಟ್ಟಿಗೆ ಕಾಣಿಸಿಕೊಂಡಿದ್ದಾರೆ. ಈ ಬೆಳವಣಿಗೆ ಇದೀಗ ಸಾಕಷ್ಟು ಅನುಮಾನಗಳಿಗೆ ಕಾರಣವಾಗಿದೆ.
ಈ ಸಂದರ್ಭದಲ್ಲಿ ಮಾತನಾಡಿದ ಬಚ್ಚೇಗೌಡ, ತಾವು ಚಿಕ್ಕಬಳ್ಳಾಪುರ ಕ್ಷೇತ್ರದ ಲೋಕಸಭಾ ಸದಸ್ಯರಾಗಿದ್ದರೆ ಪುತ್ರ ಹೊಸಕೋಟೆ ಶಾಸಕರಾಗಿದ್ದಾರೆ. ಇಂತಹ ಅಪರೂಪದ ತಂದೆ-ಮಗನ ಜೋಡಿ ನಮ್ಮದು ಎಂದು ಹೇಳಿಕೊಂಡಿದ್ದಾರಲ್ಲದೆ, ಹೊಸಕೋಟೆಯ ಜನತೆ ಸ್ವಾಭಿಮಾನಕ್ಕೆ ಮನ್ನಣೆ ನೀಡಿದ್ದಾರೆ ಎನ್ನುವ ಮೂಲಕ ಪುತ್ರನ ಗೆಲುವಿಗೆ ಸಮರ್ಥನೆ ನೀಡಿದ್ದಾರೆ.