ಬೆಂಗಳೂರು : ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ಇದ್ದರೆ ಚಿಕಿತ್ಸೆಗೆ ಮತ್ಯಾವುದೇ ದಾಖಲೆಗಳ ಅವಶ್ಯಕತೆ ಇಲ್ಲ ಎಂದು ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ಒಂದು ವೇಳೆ ಈ ಬಗ್ಗೆ ಜನರಿಂದ ದೂರು ಬಂದರೆ ಶಿಸ್ತು ಕ್ರಮದ ಎಚ್ಚರಿಕೆಯನ್ನು ಸಿಬ್ಬಂದಿಗೆ ನೀಡಲಾಗಿದೆ.
ಚಿಕಿತ್ಸೆಗಾಗಿ ಫಲಾನುಭವಿಗಳು ಆಸ್ಪತ್ರೆಗಳಿಗೆ ಆಗಮಿಸಿದಾಗ ಮತ್ತು ಒಳರೋಗಿಗಳಾಗಿ ದಾಖಲಿಸಿಕೊಂಡ ನಂತರ ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್ ನೀಡಿದರೂ ಸಹ ಪೂರಕವಾಗಿ ಪಡಿತರ ಮತ್ತು ಆಧಾರ್ ಕಾರ್ಡ್ಗಳನ್ನು ಒದಗಿಸುವಂತೆ ಆಸ್ಪತ್ರೆಗಳಲ್ಲಿ ಒತ್ತಾಯಪಡಿಸುತ್ತಿರುವುದು ಇಲಾಖೆಯ ಆಯುಕ್ತರ ಗಮನಕ್ಕೆ ಬಂದಿದೆ.
ಇದಲ್ಲದೇ ರಾಜ್ಯದ ಕೆಲವು ಆಸ್ಪತ್ರೆಗಳಲ್ಲಿ ಆಯುಷ್ಮಾನ್ ಕಾರ್ಡ್ ಹೊಂದಿದ್ದರೂ ಪೂರಕ ದಾಖಲೆಗಳನ್ನು ಕೇಳಿ ಅನಾನುಕೂಲ ಉಂಟು ಮಾಡುತ್ತಿರುವುದಾಗಿ ದೂರವಾಣಿ ಕರೆಗಳ ಮೂಲಕ ರೋಗಿಗಳು ಅಳಲು ತೋಡಿಕೊಂಡಿದ್ದಾರೆ.
ಹೀಗಾಗಿ, ಆರೋಗ್ಯ ಕಾರ್ಡ್ ಇರುವ ರೋಗಿಗಳಿಗೆ ಪೂರಕ ದಾಖಲೆಗಳನ್ನು ಒದಗಿಸುವಂತೆ ಸೂಚಿಸುವುದು ಯೋಜನೆಯ ಉದ್ದೇಶಕ್ಕೆ ವಿರುದ್ಧವಾಗಿದೆ. ನಿಯಮಾನುಸಾರ ದುರ್ನಡತೆ ಎಂದು ಪರಿಗಣಿಸಿ ಶಿಸ್ತಿನ ಕ್ರಮಕೈಗೊಳ್ಳಬೇಕಾಗುತ್ತದೆ ಅಂತಾ ಎಚ್ಚರಿಕೆ ನೀಡಲಾಗಿದೆ.
ಆರೋಗ್ಯ ಕರ್ನಾಟಕ ಗುರುತಿನ ಚೀಟಿಯೊಂದಿಗೆ ಆಸ್ಪತ್ರೆಗೆ ಆಗಮಿಸಿದಾಗ ಆಸ್ಪತ್ರೆಯಲ್ಲಿರುವ ಯಾವುದೇ ಸಿಬ್ಬಂದಿ ಪೂರಕ ದಾಖಲೆಗಳನ್ನು ಒದಗಿಸುವಂತೆ ಒತ್ತಾಯಿಸುವುದನ್ನು ನಿಷೇಧಿಸಲಾಗಿದೆ.
ಗುರುತಿನ ಚೀಟಿ ಇಲ್ಲದೇ ಇರುವ ಅರ್ಹ ರೋಗಿಗಳು ಚಿಕಿತ್ಸೆಗಾಗಿ ಆಗಮಿಸಿದಾಗ ಅವರ ಬಳಿ ಲಭ್ಯವಿರುವ ಪಡಿತರ ಚೀಟಿ ಮತ್ತು ಆಧಾರ್ ಕಾರ್ಡ್ಗಳ ಆಧಾರದ ಮೇಲೆ ದಾಖಲಿಸಿಕೊಂಡು ದರ ರಹಿತ ಚಿಕಿತ್ಸೆ ನೀಡುವ ಎಲ್ಲ ಅವಶ್ಯಕ ಕ್ರಮಗಳನ್ನು ನಿಯಮಾನುಸಾರ ಕೈಗೊಳ್ಳುವಂತೆ ಸೂಚಿಸಲಾಗಿದೆ.
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ
ರಾಜ್ಯದ ಆದ್ಯತೆ ಮತ್ತು ಸಾಮಾನ್ಯ ಕುಟುಂಬದ ಸದಸ್ಯರಿಗೆ ಶೀಘ್ರ ಮತ್ತು ಶುಲ್ಕ ರಹಿತ ಚಿಕಿತ್ಸೆಯನ್ನು ಒದಗಿಸುವ ಉದ್ದೇಶವನಿಟ್ಟುಕೊಂಡು ಯೋಜನೆ ಪ್ರಾರಂಭಿಸಲಾಗಿದೆ. ಚಿಕಿತ್ಸೆಯು ಸರ್ಕಾರಿ ಅಥವಾ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಅವಶ್ಯಕತೆಯ ಆಧಾರದ ಮೇಲೆ ದೊರಕುವಂತೆ ವಿನ್ಯಾಸಗೊಳಿಸಲಾಗಿದೆ.
ಪ್ರಾರಂಭದಲ್ಲಿ ಗುರುತಿನ ಚೀಟಿಗಳು ಲಭ್ಯವಿಲ್ಲದ ಕಾರಣ ಆದ್ಯತಾ ಕುಟುಂಬದ ಸದಸ್ಯರಾದರೆ, ಬಿಪಿಎಲ್ ಕಾರ್ಡ್ ಮತ್ತು ಆಧಾರ್ ಕಾರ್ಡ್ ಅನ್ನು ಫಲಾನುಭವಿಯ ಗುರುತಿಗಾಗಿ ಬಳಸಲಾಗುತ್ತಿತ್ತು.
ಗುರುತಿನ ಚೀಟಿಗಳನ್ನು ನೀಡುವಾಗ ಆಧಾರ್ ಮತ್ತು ನಾಗರಿಕ ಸರಬರಾಜು ಇಲಾಖೆಯ ಸುಪರ್ದಿಯಲ್ಲಿರುವ ಪಡಿತರ ಚೀಟಿಯ ದತ್ತಾಂಶವನ್ನು ಪರಿಶೀಲಿಸಿ, ಅವುಗಳ ಆಧಾರದ ಮೇಲೆ ವಿತರಿಸಲಾಗಿರುತ್ತಿದೆ. ಈಗಾಗಲೇ ರಾಜ್ಯದಲ್ಲಿ ಸುಮಾರು 15 ಕೋಟಿಗೂ ಹೆಚ್ಚು ಗುರುತಿನ ಚೀಟಿಗಳನ್ನು ಫಲಾನುಭವಿಗಳಿಗೆ ವಿತರಿಸಲಾಗಿದೆ.
ಇದನ್ನೂ ಓದಿ: ಜನರಲ್ ಬಿಪಿನ್ ರಾವತ್ ನಿಧನಕ್ಕೆ ಸಿಎಂ ಸೇರಿದಂತೆ ಗಣ್ಯರಿಂದ ಸಂತಾಪ..!