ಬೆಂಗಳೂರು : ಪೊಲೀಸ್ ಇಲಾಖೆಯಲ್ಲಿ ಹೆಚ್ಚಾಗುತ್ತಿರುವ ಕೊರೊನಾ ವ್ಯಾಧಿ ತಡೆಗಟ್ಟಲು ಹಾಗೂ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ನಗರ ಸಂಚಾರ ಪೊಲೀಸ್ ಇಲಾಖೆಯ ವತಿಯಿಂದ ನಗರದ ಎಲ್ಲಾ ಟ್ರಾಫಿಕ್ ಪೊಲೀಸರಿಗೆ ಆರ್ಯುವೇದ ಮಾತ್ರೆಗಳನ್ನು ನೀಡಲಾಗುತ್ತಿದೆ.
ನಗರದಲ್ಲಿ 750ಕ್ಕಿಂತ ಹೆಚ್ಚು ಪೊಲೀಸರಿಗೆ ಕೊರೊನಾ ಸೋಂಕು ಕಾಣಿಸಿದೆ. ಒಂದು ಸಾವಿರಕ್ಕಿಂತ ಹೆಚ್ಚು ಪೊಲೀಸರು ಕ್ವಾರಂಟೈನ್ನಲ್ಲಿದ್ದಾರೆ. ಹೀಗಾಗಿ ಕೊರೊನಾ ಸೋಂಕು ಬರದಂತೆ ಎಚ್ಚರವಹಿಸಲು ಹಾಗೂ ಪೊಲೀಸರಲ್ಲಿ ಇಮ್ಯುನಿಟಿ ಪವರ್ ಹೆಚ್ಚಿಸಲು ಕಾರಣವಾಗುವ ಮೂರು ರೀತಿಯ ಔಷಧಿಗಳನ್ನು ನೀಡಲಾಗುತ್ತಿದೆ.
ಅರೆನಿಕ್ಸಮ್ ಆಲ್ಬಂ-30 (ಹೋಮಿಯೊಪತಿ) ಮೊದಲ ಮೂರು ದಿನ ( ಖಾಲಿ ಹೊಟ್ಟೆಯಲ್ಲಿ ತಿಂಡಿ ತಿನ್ನುವ ಅರ್ಧ ಗಂಟೆ ಮುಂಚಿತವಾಗಿ ನಾಲಿಗೆ ಕೆಳಗೆ ಇಟ್ಟುಕೊಳ್ಳುವುದು) ಎರಡು ತಿಂಗಳವರೆಗೆ ಇದೇ ರೀತಿ ಮಾತ್ರೆ ತಿನ್ನಬೇಕಿದೆ. ಸಂಶಯಮನಿ ವಟಿ (ಆರ್ಯುವೇದ ಔಷಧಿ)4ನೇ ದಿನದಿಂದ ದಿನಕ್ಕೆ ಎರಡು ಬಾರಿ ಒಂದೊಂದು ಮಾತ್ರೆ ಸೇವಿಸಿ 20 ದಿನಗಳವರೆಗೆ ತೆಗೆದುಕೊಳ್ಳಬೇಕು. ಊಟದ ನಂತರ ಬಿಸಿ ನೀರು ಸೇವಿಸಬೇಕು.
ಆರ್ಕ್ ಎ ಅಬೀಬ್ (ಯುನಾನಿ)2-3 ಹನಿಗಳನ್ನು ಟಿಶ್ಯೂ ಅಥವಾ ಕರವಸ್ತ್ರಕ್ಕೆ ಹಾಕಿ ಆಗಾಗ ವಾಸನೆ ತೆಗೆದುಕೊಳ್ಳುವುದು. ಕುದಿಯುವ ನೀರಿಗೆ ಎರಡು ಹಾಕಿ ಆವಿ ತೆಗೆದುಕೊಳ್ಳಬೇಕು. ಅದೇ ರೀತಿ ಮನೆಯಲ್ಲಿ ಎಲ್ಲರೂ ಕಷಾಯ ಮಾಡಿ ಸೇವಿಸಬೇಕು ಎಂದು ಪೊಲೀಸರಿಗೆ ಸೂಚನೆ ನೀಡಲಾಗಿದೆ.