ಬೆಂಗಳೂರು: ಪೊಲೀಸ್ ಸಿಬ್ಬಂದಿಗೆ ನೌಕರರ ಯಾವುದೇ ಸವಲತ್ತು ಕೊಟ್ಟಿಲ್ಲ. ಔರಾದ್ಕರ್ ವರದಿಯಲ್ಲಿ ಲೋಪಗಳಿದ್ದು, ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳದಿದ್ದರೆ ಶಾಸಕನಾಗಿ ನಾನೇ ಪೊಲೀಸ್ ಇಲಾಖೆ ಮೇಲೆ ಕೇಸ್ ಹಾಕುತ್ತೇನೆ ಎಂದು ಎಂಎಲ್ಸಿ ಆಯನೂರು ಮಂಜುನಾಥ್ ಎಚ್ಚರಿಕೆ ನೀಡಿದ ಪ್ರಸಂಗ ವಿಧಾನ ಪರಿಷತ್ನಲ್ಲಿ ನಡೆಯಿತು.
ವಿಧಾನ ಪರಿಷತ್ ಕಲಾಪದಲ್ಲಿ ನಿಯಮ 68ರ ಅಡಿ ಪೊಲೀಸ್ ನೌಕರರ ವೇತನ, ಸೌಲಭ್ಯ, ಭತ್ಯೆ ಮತ್ತು ಇತರ ವಿಷಯಗಳಲ್ಲಿ ಆಗುತ್ತಿರುವ ಅನ್ಯಾಯದ ಕುರಿತು ನಡೆದ ಚರ್ಚೆಯಲ್ಲಿ ಮಾತನಾಡಿದ ಆಯನೂರು ಮಂಜುನಾಥ್, ಔರಾದ್ಕರ್ ವರದಿಯಲ್ಲಿ ನ್ಯೂನತೆ ಉಂಟಾಗಿದೆ. ಔರಾದ್ಕರ್ ವರದಿಯಲ್ಲಿನ ತಾರತಮ್ಯ ನಿವಾರಣೆ ಮಾಡಬೇಕು. ಬೇರೆ ಬೇರೆ ರಾಜ್ಯದ ನಿಯಮಗಳನ್ನು ಪರಿಶೀಲನೆ ಮಾಡಿ ಕ್ರಮ ತೆಗೆದುಕೊಳ್ಳಿ. ಹಗಲು ರಾತ್ರಿ ನಮಗಾಗಿ ಕೆಲಸ ಮಾಡ್ತಾರೆ. ಹೊಸಬರಿಗೆ ಮಾತ್ರ ಸಂಬಳ ಜಾಸ್ತಿ ಆಯ್ತು. ಸಿನಿಯರ್ಗಳಿಗೆ ಸಂಬಳ ಜಾಸ್ತಿ ಆಗಿಲ್ಲ. ಈ ತಾರತಮ್ಯ ಸರಿ ಮಾಡಬೇಕು ಎಂದು ಒತ್ತಾಯಿಸಿದರು.
ಪೊಲೀಸ್ ಸಿಬ್ಬಂದಿಗೆ ನೌಕರರ ಯಾವುದೇ ಸವಲತ್ತು ಕೊಟ್ಟಿಲ್ಲ. ಸರ್ಕಾರ ಈ ಬಗ್ಗೆ ಕ್ರಮ ತೆಗೆದುಕೊಳ್ಳದೇ ಹೋದರೆ ಶಾಸಕನಾಗಿ ನಾನೇ ಪೊಲೀಸ್ ಇಲಾಖೆ ಮೇಲೆ ಕೇಸ್ ಹಾಕುತ್ತೇನೆ. ಸಚಿವರು, ಮೇಲಧಿಕಾರಿಗಳಿಗೆ ವರ್ಷ ವರ್ಷ ಸಂಬಳ ಜಾಸ್ತಿ ಆಗುತ್ತದೆ. ಆದರೆ, ಪೊಲೀಸರಿಗೆ ಮಾತ್ರ ಆಗುತ್ತಿಲ್ಲ. ಪೊಲೀಸ್ ಇಲಾಖೆಯಲ್ಲಿ ಗುಲಾಮಿ ಪದ್ದತಿ ಇದೆ. ಹೀಗಾಗಿ, ಈ ವ್ಯವಸ್ಥೆ ಸರಿ ಮಾಡಬೇಕು ಎಂದು ಆಯನೂರು ಮಂಜುನಾಥ್ ಆಗ್ರಹಿಸಿದರು.
ಪೊಲೀಸರಿಗೆ ವಾರದ ರಜೆ ಇಲ್ಲ. ಪ್ರಮೋಷನ್ ಕೂಡ ಕೊಡುತ್ತಿಲ್ಲ. ಸಮಯ ನೋಡದೇ ಕೆಲಸ ಮಾಡ್ತಾರೆ. ಒಟಿ ಕೂಡ ಕೊಡುವುದಿಲ್ಲ. ಅಧಿಕಾರಿಗಳ ಮುಂದೆ ಸಿಬ್ಬಂದಿ ಕೈ ಕಟ್ಟಿ ನಿಲ್ಲಬೇಕು. ಪೊಲೀಸರು ಈ ದೇಶದ ಪ್ರಜೆಗಳು ಅಲ್ವಾ?, ಔರಾದ್ಕರ್ ವರದಿ ಲೋಪ ಸರಿ ಮಾಡಿ ಎಂದರು.
ಚರ್ಚೆಗೆ ಉತ್ತರಿಸಿದ ಗೃಹ ಸಚಿವ ಆರಗ ಜ್ಞಾನೇಂದ್ರ, 2016 ರಲ್ಲಿ ಔರಾದ್ಕರ್ ಸಮಿತಿ ನೇಮಕ ಮಾಡಲಾಗಿತ್ತು. 2019 ರಿಂದ ವರದಿ ಜಾರಿ ಮಾಡಲಾಗಿದೆ. ಈ ವರದಿಯಿಂದ 80,536 ಸಿಬ್ಬಂದಿಗೆ ಅನುಕೂಲ ಆಗಿದೆ. ಯಾರಿಗೆ ತಾರತಮ್ಯ ಆಗಿದೆ ಅದನ್ನ ಸರಿ ಮಾಡಲು ಸಿಎಂ ಜೊತೆ ಚರ್ಚೆ ಮಾಡಲಾಗಿದೆ. ಶೀಘ್ರವೇ ಈ ಬಗ್ಗೆ ಪರಿಹಾರ ಕ್ರಮ ತೆಗೆದುಕೊಳ್ಳುತ್ತೇವೆ. ಭತ್ಯೆಗಳನ್ನ ಈಗಾಗಲೇ ಹೆಚ್ಚಳ ಮಾಡಲಾಗಿದೆ. ಸಮವಸ್ತ್ರ ಭತ್ಯೆ, ಸಾರಿಗೆ ಭತ್ಯೆ, ಕಷ್ಟ ಪರಿಹಾರ ಭತ್ಯೆ ಹೆಚ್ಚಳ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.
ಯಾರಿಗೆ ತಾರತಮ್ಯ ಆಗಿದೆಯೋ ಅದನ್ನ ಸರಿ ಮಾಡುವ ಕೆಲಸ ಮಾಡಲಾಗುತ್ತದೆ. ಸಿಎಂ ಬಸವರಾಜ ಬೊಮ್ಮಾಯಿ ಹಾಗೂ ಆರ್ಥಿಕ ಇಲಾಖೆ ಜೊತೆ ಚರ್ಚೆ ಮಾಡಿ ಅಗತ್ಯ ಕ್ರಮ ತೆಗೆದುಕೊಳ್ಳುತ್ತೇನೆ ಎಂದು ಭರವಸೆ ನೀಡಿದರು.
ಇದನ್ನೂ ಓದಿ: ಆಂಧ್ರದ ಶ್ರೀಶೈಲಂನಲ್ಲಿ ಕನ್ನಡಿಗರು, ಸ್ಥಳೀಯರ ನಡುವೆ ಘರ್ಷಣೆ: ವಾಹನಗಳು, ಅಂಗಡಿಗಳಿಗೆ ಹಾನಿ