ಬೆಂಗಳೂರು : ಪಾರ್ಕಿನ್ಸನ್ ಕಾಯಿಲೆಯ(Parkinson's) ಬಗ್ಗೆ ಜಾಗೃತಿ ಹೆಚ್ಚಿಸುವ ಸಲುವಾಗಿ ಆಸ್ಟರ್ ಸಿಎಂಐ ಆಸ್ಪತ್ರೆ ಹಾಗೂ ಬೆಂಗಳೂರಿನ ಐ ಲವ್ ಟು ಕೇರ್ (ಇಂಡಿಯಾ) ಚಾರಿಟಬಲ್ ಟ್ರಸ್ಟ್ ಸಹಭಾಗಿತ್ವದಲ್ಲಿ ವಾಕಥಾನ್ ಜಾಗೃತಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಪಾರ್ಕಿನ್ಸನ್ ರೋಗಿಗಳು, ವೃತ್ತಿಪರರು, ವೈದ್ಯರು ಮತ್ತು ದಾದಿಯರು ಸೇರಿದಂತೆ 100ಕ್ಕೂ ಹೆಚ್ಚು ಮಂದಿ ಭಾಗವಹಿಸಿದರು. ಸರ್ಕಾರದ ಕಾರ್ಮಿಕ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ಕಲ್ಪನಾ ಗೋಪಾಲನ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಪಾರ್ಕಿನ್ಸನ್ ಕಾಯಿಲೆ ಒಂದು ನ್ಯೂರೋ ಡಿಜೆನೆರೇಟಿವ್ ಡಿಸಾರ್ಡರ್ ಆಗಿದೆ. ಇದು ನಿಧಾನವಾಗಿ ಪ್ರಾರಂಭವಾಗಿ, ದೀರ್ಘಾವಧಿಯಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತೆ. ಪಾರ್ಕಿನ್ಸನ್ ಕಾಯಿಲೆಯಿಂದ ಬಳಲುತ್ತಿರುವವರು ಕೈಕಾಲುಗಳ ನಡುಗುವಿಕೆ, ಸ್ನಾಯುಗಳ ಬಿಗಿತ, ನಡೆಯಲು ತೊಂದರೆ ಮತ್ತು ಸಮತೋಲನ, ಸಮನ್ವಯವನ್ನು ಕಾಪಾಡಿಕೊಳ್ಳಲು ಕಷ್ಟವಾಗುವುದು ಮುಂತಾದ ಲಕ್ಷಣಗಳು ಕಾಣಿಸುತ್ತೆ.
ರೋಗವು ಉಲ್ಬಣಗೊಳ್ಳುತ್ತಿದ್ದಂತೆ ಮಾತನಾಡಲು ತೊಂದರೆ, ನಿದ್ರಾಹೀನತೆ, ನೆನಪಿನ ಸಮಸ್ಯೆಗಳು, ಮಾನಸಿಕ ಸಮಸ್ಯೆಗಳು, ನಡವಳಿಕೆಯಲ್ಲಿ ಬದಲಾವಣೆಗಳು ಮತ್ತು ಇತರ ಹಲವಾರು ಅಡ್ಡಪರಿಣಾಮಗಳನ್ನು ಅನುಭವಿಸುತ್ತಾರೆ. ಕಾರ್ಮಿಕ ಮತ್ತು ಸಾರ್ವಜನಿಕ ಕುಂದುಕೊರತೆಗಳ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಕಲ್ಪನಾ ಗೋಪಾಲನ್ ಮಾತನಾಡಿ, ಪಾರ್ಕಿನ್ಸನ್ ಕಾಯಿಲೆಗೆ ಚಿಕಿತ್ಸೆ ನೀಡಬಹುದಾಗಿದೆ.
ನಿಭಾಯಿಸಲು ಸಾಧ್ಯ ಎಂಬುದನ್ನು ಎಲ್ಲರೂ- ರೋಗಿಗಳು, ಕುಟುಂಬಗಳು ಮತ್ತು ಸಮಾಜ ಅರ್ಥ ಮಾಡಿಕೊಳ್ಳಬೇಕು. ಆದಾಗ್ಯೂ, ಪಾರ್ಕಿನ್ಸನ್ ಕಾಯಿಲೆ ಹೆಚ್ಚುತ್ತಿರುವುದನ್ನು ಪರಿಗಣಿಸಿ, ಪಾರ್ಕಿನ್ಸೋನಿಸಂ ಬಗ್ಗೆ ಜಾಗೃತಿ ಮೂಡಿಸುವ ಮತ್ತು ಸಾರ್ವಜನಿಕ ತುರ್ತು ಪ್ರಜ್ಞೆಯನ್ನು ಬೆಳೆಸುವ ಅವಶ್ಯಕತೆಯಿದೆ ಎಂದರು.
ಆಸ್ಟರ್ ಹಾಸ್ಪಿಟಲ್ಸ್ ಬೆಂಗಳೂರು ಗ್ಲೋಬಲ್ ಸೆಂಟರ್ ಆಫ್ ಎಕ್ಸಲೆನ್ಸ್ ಇನ್ ನ್ಯೂರೋಸೈನ್ಸ್ನ ನ್ಯೂರೋಸರ್ಜನ್ ಡಾ. ರವಿ ಗೋಪಾಲ್ ವರ್ಮಾ ಮಾತನಾಡಿ, ಭಾರತದಲ್ಲಿ ಸುಮಾರು 10 ಲಕ್ಷ ಪಾರ್ಕಿನ್ಸನ್ ರೋಗಿಗಳು ಇದ್ದಾರೆ. ಪ್ರತಿ ವರ್ಷ 75,000 ಹೊಸಬರಲ್ಲಿ ಈ ರೋಗ ಪತ್ತೆಯಾಗುತ್ತಿದೆ. ಈ ರೋಗವು ಹೆಚ್ಚಾಗಿ 60 ವರ್ಷ ಮತ್ತು ಮೇಲ್ಪಟ್ಟ ವಯಸ್ಸಾದವರನ್ನು ಕಾಡುತ್ತದೆ. ಆದರೆ, ಈಗ ಇದನ್ನು ಯುವ ಪೀಳಿಗೆಯಲ್ಲಿಯೂ ಕಾಣಬಹುದು. ಪಾರ್ಕಿನ್ಸನ್ ಕಾಯಿಲೆಗೆ ಚಿಕಿತ್ಸೆಯಿದೆ ಎಂದರು.
ಇದನ್ನೂ ಓದಿ: ರಾಜ್ಯದ ಹಲವೆಡೆ ಎರಡು ದಿನ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ