ಬೆಂಗಳೂರು : ಬಿಬಿಎಂಪಿಯಲ್ಲಿ 250 ವಾರ್ಡ್ಗಳ ರಚನೆಗೆ ಸರ್ಕಾರ ಸದನದ ಅನುಮತಿ ಪಡೆದಿದೆ. ವಿಧಾನಸಭೆಯಲ್ಲಿ ಕರ್ನಾಟಕ ನಗರ ಪಾಲಿಕೆಗಳ (ಎರಡನೇ ತಿದ್ದುಪಡಿ) ವಿಧೇಯಕ 2020 ಅನುಮೋದನೆ ಪಡೆಯುವ ಸಂದರ್ಭದಲ್ಲಿ ಬಿಬಿಎಂಪಿಯಲ್ಲಿ 250 ವಾರ್ಡ್‌ಗೆ ಹೆಚ್ಚಿಸುವ ಪ್ರಸ್ತಾಪಕ್ಕೂ ಸದನದ ಅಂಗೀಕಾರ ಪಡೆಯಲಾಯಿತು. ಬಿಬಿಎಂಪಿ ವಿಧೇಯಕ ಸಂಬಂಧ ರಚಿಸಲಾಗಿರುವ ಜಂಟಿ ಸದನ ಪರಿಶೀಲನಾ ಸಮಿತಿ ನಿನ್ನೆ 255 ವಾರ್ಡ್ ರಚನೆ ಬಗ್ಗೆ ಮಧ್ಯಂತರ ವರದಿ ಮಂಡಿಸಲಾಗಿತ್ತು. ಇದೀಗ 250 ವಾರ್ಡ್ ರಚಿಸುವ ಸಂಬಂಧ ಸದನ ಅಂಗೀಕಾರ ನೀಡಿದೆ.
ಕರ್ನಾಟಕ ನಗರಪಾಲಿಕೆಗಳ (ಎರಡನೇ ತಿದ್ದುಪಡಿ) ವಿಧೇಯಕ 2020ದಲ್ಲೇ ಈ ಪ್ರಸ್ತಾಪವನ್ನು ಸೇರಿಸಿ ಅಂಗೀಕಾರ ಪಡೆಯಲಾಗಿದೆ. ಈ ವೇಳೆ ಮಾತನಾಡಿದ ಮಾಜಿ ಸಚಿವ ಕೆ ಜೆ ಜಾರ್ಜ್, ಬಿಬಿಎಂಪಿ ವಿಧೇಯಕ ಚರ್ಚೆಯಾಗಬೇಕು. 198 ವಾರ್ಡ್ಗಳಿಗೆ ಸರಿಯಾದ ವ್ಯವಸ್ಥೆ ಕಲ್ಪಿಸುವುದು ಕಷ್ಟ. ಈಗ 250 ವಾರ್ಡ್ ಮಾಡ್ತೇವೆ ಅಂದ್ರೆ ಕಷ್ಟ. ಸಮಸ್ಯೆಗಳನ್ನ ಸರಿಪಡಿಸುವುದು ಕಷ್ಟವಾಗಲಿದೆ. ಇದರ ಬಗ್ಗೆ ಸಮಗ್ರ ಚರ್ಚೆಯಾಗಬೇಕು ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಈ ವೇಳೆ ಮಧ್ಯಪ್ರವೇಶಿಸಿದ ಸಚಿವ ಮಾಧುಸ್ವಾಮಿ, ಬೆಂಗಳೂರು ಶಾಸಕರೇ ಜಂಟಿ ಸದನ ಪರಿಶೀಲನಾ ಸಮಿತಿ ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ಬೆಂಗಳೂರಿಗೇ ಒಂದು ವಿಶೇಷ ಕಾಯ್ದೆ ಇಟ್ಟಿದ್ದೇವೆ. ಈಗ ವಾರ್ಡ್ಗಳನ್ನು ವಿಂಗಡಿಸಬೇಕಿದೆ. ಹೀಗಾಗಿ, ಸದ್ಯಕ್ಕೆ ಬಿಬಿಎಂಪಿ ಚುನಾವಣೆ ನಡೆಸುವುದು ಕಷ್ಟ. ಈ ಬಿಲ್ ಎಲ್ಲರಿಗೂ ಅನುಕೂಲಕರವಾಗಿದೆ. ಬಿಲ್ ಮಂಡನೆಗೆ ಅವಕಾಶ ನೀಡಿ ಎಂದು ಮನವಿ ಮಾಡಿದರು.
ಇದರ ಜೊತೆಗೆ ಕರ್ನಾಟಕ ಲೋಕಾಯುಕ್ತ ತಿದ್ದುಪಡಿ ವಿಧೇಯಕ 2020, ಕರ್ನಾಟಕ ಪಟ್ಟಣ ಮತ್ತು ಗ್ರಾಮಾಂತರ ಅಧಿನಿಯಮ ತಿದ್ದುಪಡಿ ವಿಧೇಯಕ, ಸಾಂಕ್ರಾಮಿಕ ರೋಗಗಳಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿಗೆ ರಕ್ಷಣೆ ನೀಡುವ ಸಾಂಕ್ರಾಮಿಕ ರೋಗಗಳ ಕಾಯ್ದೆ ತಿದ್ದುಪಡಿ ವಿಧೇಯಕ 2020, ಕರ್ನಾಟಕ ಕೈಗಾರಿಕಾ ಸೌಲಭ್ಯಗಳ ತಿದ್ದುಪಡಿ ವಿಧೇಯಕ 2020ಗೆ ವಿಧಾನಸಭೆಯಲ್ಲಿ ಅಂಗೀಕಾರ ನೀಡಲಾಯಿತು.