ಬೆಂಗಳೂರು: ಪಾದರಾಯನಪುರದಲ್ಲಿ ವೈದ್ಯರ ಮೇಲೆ ನಡೆಸಿದ ಪುಂಡರ ಅಟ್ಟಹಾಸವನ್ನು ಭಾರತೀಯ ವೈದ್ಯಕೀಯ ಸಂಘ (ಐಎಂಎ) ತೀವ್ರವಾಗಿ ಖಂಡಿಸಿದೆ.
ವೈದ್ಯರು, ವೈದ್ಯಕೀಯ ಸಿಬ್ಬಂದಿ ಮತ್ತು ಆಸ್ಪತ್ರೆಗಳ ಮೇಲೆ ಹಲ್ಲೆಗಳು ನಡೆಯುತ್ತಲೆ ಇವೆ. ದೇಶಾದ್ಯಂತ ಈ ಹಲ್ಲೆ ಪ್ರಕರಣಗಳು ಹೆಚ್ಚುತ್ತಿರುವುದು ನಿಜಕ್ಕೂ ಕಳವಳಕಾರಿ ಹಾಗೂ ನಾಗರಿಕ ಸಮಾಜಕ್ಕೆ ಶೋಭೆ ತರುವಂತಹದ್ದಲ್ಲ ಎಂದು ಸಂಘಟನೆ ಆಕ್ರೋಶ ವ್ಯಕ್ತಪಡಿಸಿದೆ.
ಈ ನಿಟ್ಟಿನಲ್ಲಿ ರಾಷ್ಟ್ರೀಯ ಸಂಘಟನೆ ನಡೆಸಲು ನಿರ್ಧರಿಸಿರುವ ಮೌಲ್ಯಯುತ ವಿನೂತನ ಪ್ರತಿಭಟನೆಯನ್ನು ರಾಜ್ಯದ ಐಎಂಎ ವಿಭಾಗವೂ ಬೆಂಬಲಿಸುತ್ತಿದೆ. ಕರ್ನಾಟಕದ ಎಲ್ಲ ಸದಸ್ಯರು ಭಾಗವಹಿಸಬೇಕು. ಪಾದರಾಯನಪುರದಂತಹ ಹಲ್ಲೆಯ ಕೃತ್ಯಯಲ್ಲಿ ಭಾಗಿ ಆಗುವವರನ್ನು ಕಠಿಣ ಶಿಕ್ಷೆಗೆ ಗುರಿಪಡಿಸಲು ಸೂಕ್ತ ಕಾನೂನು ತರಬೇಕೆಂದು ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕಿದೆ ಎಂದು ರಾಜ್ಯದ ವಿಭಾಗ ಮನವಿ ಮಾಡಿದೆ.
ಏಪ್ರಿಲ್ 22ರಂದು ಬಿಳಿಯ ಆಪ್ರಾನ್ ಧರಿಸಿ ರಾತ್ರಿ 9ಗಂಟೆಗೆ ಆಸ್ಪತ್ರೆಯ ಮುಂದೆ ದೀಪ ಬೆಳಗಿಸುವುದು. ಏಪ್ರಿಲ್ 23ರಂದು ಕಪ್ಪು ದಿನವೆಂದು ಆಚರಿಸುವ ಸಲುವಾಗಿ ಕಪ್ಪು ಪಟ್ಟಿ ಕಟ್ಟಿಕೊಂಡು ವೈದ್ಯರು ಕೆಲಸ ಮಾಡಲಿದ್ದಾರೆ.