ಬೆಂಗಳೂರು: ಮಹಿಳೆವೋರ್ವಳು ಪತಿಯ ಚಿಕಿತ್ಸೆಗೆಂದು ತಂದಿದ್ದ ಹಣ ಹಾಗೂ ಚಿನ್ನಾಭರಣ ಎಗರಿಸಿದ್ದ ಖದೀಮರನ್ನು ಬಂಧಿಸುವಲ್ಲಿ ಪಶ್ಚಿಮ ವಿಭಾಗದ ಉಪ್ಪಾರಪೇಟೆ ಪೊಲೀಸರು ಯಶಸ್ವಿಯಾಗಿದ್ದಾರೆ.
ದಾಸ್ ಬಾಲಾಜಿ, ಪ್ರೇಮದಾಸ್, ಕುಮಾರ ಬಂಧಿತ ಆರೋಪಿಗಳು. ಇದೇ ತಿಂಗಳ 13ರಂದು ಶಿವಮೊಗ್ಗದ ಮೂಲದ ಮಹಿಳೆಯೊಬ್ಬರು ತಮ್ಮ ಪತಿಗೆ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲು ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣಕ್ಕೆ ಬಂದಿದ್ದರು. ಬಸ್ ಇಳಿದು ಬ್ಯಾಗ್ ಪರಿಶೀಲಿಸಿದಾಗ ಪತಿ ಚಿಕಿತ್ಸೆಗೆ ತಂದಿದ್ದ 98,000 ನಗದು ಹಾಗೂ 14 ಗ್ರಾಂ ಚಿನ್ನ ಕಳ್ಳತನವಾಗಿತ್ತು. ಈ ಕುರಿತು ಮಹಿಳೆ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಸದ್ಯ ಉಪ್ಪಾರಪೇಟೆ ಇನ್ಸ್ಪೆಕ್ಟರ್ ಶಿವಸ್ವಾಮಿ ತಂಡ ಆರೋಪಿಗಳನ್ನು ಹೆಡೆಮುರಿ ಕಟ್ಟಿದ್ದಾರೆ. ಬಂಧಿತರಿಂದ 14 ಗ್ರಾಂ ಚಿನ್ನ, 60,000 ನಗದು ಮತ್ತು ನಗರದ ಇತರೆಡೆ ಕಳ್ಳತನ ಮಾಡಿದ್ದ 126 ಮೊಬೈಲ್ ಫೋನ್ ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.