ಬೆಂಗಳೂರು : ಮರಾಠಿ ಪ್ರಾಧಿಕಾರ ರಚನೆ ವಿರೋಧಿಸಿ ಮೈಸೂರು ಬ್ಯಾಂಕ್ ವೃತ್ತದಲ್ಲಿ ನಡೆದ ಪ್ರತಿಭಟನೆಯಲ್ಲಿ ಮರಾಠಿ ಪ್ರಾಧಿಕಾರ ರಚನೆ ಆದೇಶದ ಪ್ರತಿಕೃತಿ ಹರಿದು ಹಾಕುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಕನ್ನಡ ಒಕ್ಕೂಟದ ಅಧ್ಯಕ್ಷರಾದ ವಾಟಾಳ್ ನಾಗರಾಜ್ ಹಾಗೂ ಸಾ ರಾ ಗೋವಿಂದ್ ಸೇರಿ ಹಲವರನ್ನು ಬಂಧಿಸಲಾಗಿದೆ.
ಪ್ರತಿಭಟನೆ ವೇಳೆ ಮಾತನಾಡಿದ ವಾಟಾಳ್ ನಾಗರಾಜ್, ಡಿಸೆಂಬರ್ 5ರಂದು ಕರ್ನಾಟಕ ಬಂದ್ಗೆ ಕನ್ನಡಿಗರು ತಯಾರಾಗಿದ್ದಾರೆ. ಯಡಿಯೂರಪ್ಪ ಸರ್ಕಾರ ಬಂದ್ ವಿಫಲ ಮಾಡಲು ಸಕಲ ಪ್ರಯತ್ನ ಮಾಡುತ್ತಿದೆ. ಬಂದ್ ನೂರಕ್ಕೆ ನೂರು ಆಗೇ ಆಗುತ್ತೆ. ಕರ್ನಾಟಕದ ಜನತೆ ಡಿ.5ರಂದು ಬಸ್ ನಿಲ್ದಾಣಕ್ಕೆ ಬರಬೇಡಿ.
ಹೋಟೆಲ್ಗಳಿಗೆ ಹೋಗಬೇಡಿ. ಅಖಂಡ ಕರ್ನಾಟಕ ಬಂದ್ ಆಗೇ ಆಗುತ್ತದೆ. ಬಂದ್ನಲ್ಲಿ ಕನ್ನಡಪರ ಸಂಘಟನೆಗಳ 25 ಸಾವಿರಕ್ಕೂ ಹೆಚ್ಚು ಮಂದಿ ಭಾಗವಹಿಸುತ್ತಾರೆ. ಮರಾಠ ಅಭಿವೃದ್ಧಿ ಪ್ರಾಧಿಕಾರದ ಆದೇಶದ ಪ್ರತಿಗೆ ಬೆಂಕಿ ಇಡುವ ಮೂಲಕ ತೀವ್ರವಾಗಿ ವಿರೋಧಿಸುತ್ತೇವೆ.
ಮರಾಠಿ ಪ್ರಾಧಿಕಾರವನ್ನು ಸಂಪೂರ್ಣ ವಿರೋಧಿಸುತ್ತೇವೆ. ಡಿಸೆಂಬರ್ 5ರ ಬೆಳಗ್ಗೆ 10.30ಕ್ಕೆ ಲಕ್ಷಾಂತರ ಜನರಿಂದ ಬೃಹತ್ ಮೆರವಣಿಗೆ ಕೈಗೊಳ್ಳಲಿದ್ದೇವೆ ಎಂದರು. ಈ ಪ್ರತಿಭಟನೆಗೆ ತಡೆಯೊಡ್ಡಿದ ಪೊಲೀಸರು, ವಾಟಾಳ್ ನಾಗರಾಜ್, ಸಾ ರಾ ಗೋವಿಂದ್ ಸೇರಿ ಪ್ರತಿಭಟನಾ ನಿರತರನ್ನು ಬಂಧಿಸಿ, ಪೊಲೀಸ್ ವಾಹನದಲ್ಲಿ ಬೇರೆಡೆಗೆ ಕರೆದುಕೊಂಡು ಹೋದರು.
ಪ್ರತಿಭಟನೆಯಲ್ಲಿ ಮರಾಠಿ ಪ್ರಾಧಿಕಾರ ರಚನೆ ವಿರುದ್ಧ ಒಕ್ಕೂರಲಿನಿಂದ ಗಿರೀಶ್ ಗೌಡ, ಮಂಜುನಾಥ್ ದೇವ, ವೆಂಕಟೇಶ್, ಅಮ್ಮಿಚಂದ್ರು ಕನ್ನಡ ಕೃಷ್ಣ, ಕನ್ನಡಪರ ಚಿಂತಕ ಜಿ ಎಂ ರಾಮು, ಮುನ್ನಾವರ ಪಾರ್ಥಸಾರಥಿ, ವಿಶ್ವನಾಥ್ ಗೌಡ, ವೇಣುಗೋಪಾಲ್, ನರಸಿಂಹಮೂರ್ತಿ, ಜಾಫರ್ ಸಾಧಿಕ್ ಸೇರಿ ನೂರಾರು ಮುಖಂಡರು ಭಾಗಿಯಾಗಿದ್ದರು.