ಬೆಂಗಳೂರು: ಗೊಂಬೆಯೊಳಗೆ (ಬೇಬಿ ಡಾಲ್) ಹೆರಾಯಿನ್ ಇಟ್ಟು ಕಾರಿನಲ್ಲಿ ಸಾಗಣೆ ಮಾಡುತ್ತಿದ್ದ ಉತ್ತರ ಭಾರತದ ಮೂಲದ ಆರೋಪಿಯನ್ನು ಬಂಧಿಸುವಲ್ಲಿ ಹಲಸೂರು ಪೊಲೀಸರು ಯಶಸ್ವಿಯಾಗಿದ್ದಾರೆ.
ಅಸ್ಸೋಂ ಮೂಲದ ಸಕೀರ್ ಹುಸೇನ್ ಚೌಧರಿ ಬಂಧಿತ ಆರೋಪಿ. ಬಂಧಿತನಿಂದ 28 ಲಕ್ಷ ಮೌಲ್ಯದ 165 ಗ್ರಾಂ ತೂಕದ 2,200 ಎಂಡಿಎ ಮಾತ್ರೆಗಳು ಹಾಗೂ 71 ಗ್ರಾಂ ತೂಕದ ಹೆರಾಯಿನ್ ಹಾಗೂ ಕಾರ್ ಜಪ್ತಿ ಮಾಡಲಾಗಿದೆ.
ಡಿ.3 ರಂದು ಸಂಜೆ ಹಳೆ ಮದ್ರಾಸ್ ರಸ್ತೆಯ ಎಂ.ವಿ.ಗಾರ್ಡನ್ ಬಳಿ ಪೊಲೀಸರು ತಪಾಸಣೆ ನಡೆಸುತ್ತಿದ್ದರು. ಅನುಮಾನಸ್ಪಾದವಾಗಿ ಕಂಡ ಕಾರನ್ನು ಅಡ್ಡಗಟ್ಟಿ ವಿಚಾರಿಸಲು ಮುಂದಾದಾಗ ಆರೋಪಿ ಗೊಂಬೆಯನ್ನು ಮುಚ್ಚಿಡಲು ಪ್ರಯತ್ನಿಸುತ್ತಿದ್ದ.
ಇದನ್ನು ಓದಿ-ರಾಗಿಣಿ ಜಾಮೀನು ಅರ್ಜಿ ವಿಚಾರಣೆ: ವಿವರ ಕೇಳಿ ರಾಜ್ಯ ಸರ್ಕಾರಕ್ಕೆ ‘ಸುಪ್ರೀಂ’ ನೋಟಿಸ್
ಇದನ್ನು ಕಂಡು ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡು ತಪಾಸಣೆಗೆ ಒಳಪಡಿಸಿದಾಗ ಮಾದಕ ವಸ್ತು ಸಾಗಣೆ ಮಾಡುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಗೊಂಬೆಯೊಳಗೆ ಏಳು ಪ್ಲಾಸ್ಟಿಕ್ ಬಾಕ್ಸ್ನಲ್ಲಿ 71 ಗ್ರಾಂನಷ್ಟು ಹೆರಾಯಿನ್ ಮತ್ತು ಆರೋಪಿಯ ಪ್ಯಾಂಟ್ ಕಿಸೆಯಲ್ಲಿ 2200 ಎಂಡಿಎಂ ಮಾತ್ರೆ ಪತ್ತೆಯಾಗಿದೆ.
ಸುಲಭವಾಗಿ ಹಣ ಸಂಪಾದನೆ ಮಾಡುವು ಉದ್ದೇಶದಿಂದ ಅಸ್ಸೋನಿಂದ ಹೆರಾಯಿನ್ ಹಾಗೂ ಎಂಡಿಎ ಮಾತ್ರೆಗಳನ್ನು ಅಕ್ರಮವಾಗಿ ತರಿಸಿಕೊಂಡು ನಗರದಲ್ಲಿ ಮಾರಾಟ ಮಾಡುತ್ತಿದ್ದ ವಿಚಾರ ತನಿಖೆಯಲ್ಲಿ ಗೊತ್ತಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಹಲಸೂರು ಪೊಲೀಸರು ಆರೋಪಿಯನ್ನು ಹೆಚ್ಚಿನ ವಿಚಾರಣೆಗೊಳಪಡಿಸಿದ್ದಾರೆ.