ಬೆಂಗಳೂರು: ಮನೆ ಕಳ್ಳತನದಲ್ಲಿ ಸಕ್ರಿಯವಾಗಿದ್ದ ಒಂದೇ ಕುಟುಂಬದ ಮೂವರು ಮತ್ತು ಖರೀದಿ ಮಾಡುತ್ತಿದ್ದ ಇಬ್ಬರು ಸೇರಿ ಐವರು ಆರೋಪಿಗಳನ್ನು ಸಂಪಿಗೆಹಳ್ಳಿ ಠಾಣಾ ಪೊಲೀಸರು ಬಂಧಿಸಿದ್ದಾರೆ. ಕೆ.ಜಿ.ಹಳ್ಳಿ ನಿವಾಸಿ ಜಾನ್ ಪ್ರವೀಣ್ (32), ಆತನ ಪತ್ನಿ ಆನಂದಿ (19), ಅತ್ತೆ ಧನಲಕ್ಷ್ಮಿ (36) ಹಾಗೂ ಕಳವು ಮಾಲು ಸ್ವೀಕರಿಸುತ್ತಿದ್ದ ಭವರ್‌ಲಾಲ್ (48), ಚೇತನ್ ಚೌಧರಿ (29) ಬಂಧಿತ ಆರೋಪಿಗಳು.
ಆರೋಪಿಗಳ ಪೈಕಿ ಜಾನ್ ಪ್ರವೀಣ್ ಇತ್ತೀಚಿಗೆ ಸಂಪಿಗೆಹಳ್ಳಿ ಠಾಣಾ ವ್ಯಾಪ್ತಿಯ ಮನೆಯೊಂದರಲ್ಲಿ ಕಳ್ಳತನ ಮಾಡಿದ್ದ. ಆತನ ಪತ್ನಿ ಆನಂದಿ ಹಾಗೂ ಅತ್ತೆ ಧನಲಕ್ಷ್ಮಿ ಕಳವು ಮಾಲು ಮಾರಾಟ ಮಾಡಿಸುವ ಮೂಲಕ ಕೃತ್ಯಕ್ಕೆ ಸಾಥ್ ನೀಡಿದ್ದರು. ಕದ್ದಮಾಲನ್ನು ಭವರ್ ಲಾಲ್ ಮತ್ತು ಚೇತನ್ ಚೌಧರಿ ಖರೀದಿಸುತ್ತಿದ್ದರು. ಬಂಧಿತ ಆರೋಪಿಗಳಿಂದ ಪೊಲೀಸರು 17.35 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆದಿದ್ದಾರೆ.
ಆರೋಪಿಗಳ ಬಂಧನದಿಂದ ಸಂಪಿಗೆಹಳ್ಳಿ, ವಿದ್ಯಾರಣ್ಯಪುರ, ರಾಮಮೂರ್ತಿನಗರ ಠಾಣೆಗಳಲ್ಲಿ ದಾಖಲಾಗಿದ್ದ ಮನೆಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ : ಕೆಎಸ್ಪಿ ಆ್ಯಪ್ ಮೂಲಕ ಕೊಲೆ ಬೆದರಿಕೆ: ಎಸ್ಪಿ ಕೆ. ಪರಶುರಾಮ್