ಬೆಂಗಳೂರು: ಭಾರತ ಸೇರಿದಂತೆ ವಿಶ್ವದಾದ್ಯಂತ ಸದ್ದು ಮಾಡ್ತಿರುವ ಪೆಗಾಸಸ್ ಪ್ರಕರಣ ಖಂಡಿಸಿ ರಾಜ್ಯದಲ್ಲಿ ಕಾಂಗ್ರೆಸ್ ಬೀದಿಗಿಳಿದಿದೆ. ಇಂದು 'ರಾಜಭವನ ಮುತ್ತಿಗೆ'ಗೆ ಮುಂದಾದ ಕಾಂಗ್ರೆಸ್ ನಾಯಕರನ್ನು ವಿಧಾನಸೌಧ ಆವರಣದಿಂದ ದೂರ ಕ್ರಮಿಸುವ ಮಧ್ಯದಲ್ಲೇ ತಡೆದು ಬಂಧಿಸಲಾಗಿದೆ.
ವಿಧಾನಸೌಧ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಿ ನಂತರ ಕೆಂಗಲ್ ವೃತ್ತದ ಮೂಲಕ ಮೆರವಣಿಗೆ ಹೊರಟು, ರಾಜಭವನದತ್ತ ತೆರಳುತ್ತಿದ್ದ ಕಾಂಗ್ರೆಸ್ ನಾಯಕರನ್ನ ಮಾರ್ಗಮಧ್ಯೆ ತಡೆದ ಪೊಲೀಸರು, ಕಾರ್ಯಕರ್ತರ ಸಮೇತವಾಗಿ ಬಂಧಿಸಿ ಕರೆದೊಯ್ದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ವಿಧಾನಸೌಧದ ಗಾಂಧಿ ಪ್ರತಿಮೆ ಮುಂದೆ ಧರಣಿ ನಡೆಸಿದ ನಾಯಕರು, ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಮೆರವಣಿಗೆ ನಡೆಸಿದರು. ದೂರವಾಣಿ ಕದ್ದಾಲಿಕೆ ಪ್ರಕರಣವನ್ನು ತೀವ್ರವಾಗಿ ಖಂಡಿಸಿದ್ದ ಕಾಂಗ್ರೆಸ್ ನಾಯಕರು, ಮಾರ್ಗದುದ್ದಕ್ಕೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ರಾಜಭವನದ ತಿಮ್ಮಯ್ಯ ಸರ್ಕಲ್ ಬಳಿ ಬರುತ್ತಿದ್ದಂತೆ ಕಾಂಗ್ರೆಸ್ ನಾಯಕರನ್ನ ತಡೆದು ಪೊಲೀಸರು ವಶಕ್ಕೆ ಪಡೆದರು. ಪಕ್ಷದ ಕಾರ್ಯಕರ್ತರು ಸಹ ವಿಧಾನಸೌಧ ಹೊರಭಾಗದಿಂದ ಬೆಂಬಲ ಸೂಚಿಸಿ ಮೆರವಣಿಗೆಯಲ್ಲಿ ಭಾಗಿಯಾದರು. ಇವರನ್ನು ಸಹ ಮೂರಕ್ಕೂ ಹೆಚ್ಚು ಬಸ್ಗಳಲ್ಲಿ ತುಂಬಿಕೊಂಡು ಕರೆದೊಯ್ಯಲಾಯಿತು.
ವೈಎಸ್ವಿ ದತ್ತಾ ಭಾಗಿ
ಕಾಂಗ್ರೆಸ್ ನಾಯಕರ ಪ್ರತಿಭಟನೆಗೆ ಜೆಡಿಎಸ್ ಮಾಜಿ ಶಾಸಕ ವೈಎಸ್ವಿ ದತ್ತಾ ತಮ್ಮ ಬೆಂಬಲ ವ್ಯಕ್ತಪಡಿಸಿದರು. ಸಿದ್ದರಾಮಯ್ಯ ಬೆನ್ನುತಟ್ಟಿ ಸಾಥ್ ಕೊಟ್ಟ ದತ್ತಾ ಅವರು, ವಿಧಾನಸೌಧದ ಗೇಟ್ ವರೆಗೂ ಬಂದರು.
ಇದನ್ನೂ ಓದಿ: ರಾಜೀನಾಮೆ ಸುಳಿವು ನೀಡಿದ್ರಾ ಬಿಎಸ್ವೈ..? ಜು26ರ ಬಳಿಕ ಹೈಕಮಾಂಡ್ ಸೂಚನೆಯಂತೆ ಮುಂದಿನ ಕಾರ್ಯ ಎಂದ ಸಿಎಂ