ಬೆಂಗಳೂರು: ಧಾರ್ಮಿಕತೆ - ನೈತಿಕೆಯನ್ನು ನಾವು ಬೇರ್ಪಡಿಸಲು ಸಾಧ್ಯವಿಲ್ಲ. ಈ ಕ್ಲಾರೆನ್ಸ್ ಶಾಲೆಗೆ ನೂರು ವರ್ಷದ ಇತಿಹಾಸವಿದೆ. ಇಲ್ಲಿ ಶೇ. 75ರಷ್ಟು ಮಕ್ಕಳು ಕ್ರೈಸ್ತ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಬಲವಂತವಾಗಿ ಬೈಬಲ್ ಓದಿಸುತ್ತಿದ್ದೇವೆ ಎಂಬುವುದು ಸುಳ್ಳು ಎಂದು ಆರ್ಚ್ ಬಿಷಪ್ ಪೀಟರ್ ಮಚಾಡೋ ಹೇಳಿದ್ದಾರೆ.
ಬೆಂಗಳೂರಿನ ಕ್ಲಾರೆನ್ಸ್ ಹೈಸ್ಕೂಲಿನಲ್ಲಿ ಬೈಬಲ್ ಶಿಕ್ಷಣ ಕಡ್ಡಾಯಗೊಳಿಸಲಾಗಿದೆ ಎಂದು ಹಿಂದೂಪರ ಸಂಘಟನೆಯೊಂದು ಆರೋಪಿಸಿತ್ತು. ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಆರ್ಚ್ ಬಿಷಪ್ ಪೀಟರ್ ಮಚಾಡೋ ಅವರು, ನಾವು ಹಿಂದೂ, ಮುಸ್ಲಿಂ ಸಮುದಾಯಕ್ಕೆ ಸೇರಿದ ಮಕ್ಕಳಿಗೆ ಬೈಬಲ್ ಕಡ್ಡಾಯ ಮಾಡಿಲ್ಲ ಎಂದಿದ್ದಾರೆ.
ಈ ಬಗ್ಗೆ ಸರ್ಕಾರ ತನಿಖೆ ಮಾಡಲಿಚ್ಚಿಸಿದರೆ ತನಿಖೆ ಮಾಡಲಿ, ಈ ಶಾಲೆಯಲ್ಲಿ ಎಷ್ಟು ಮಕ್ಕಳು ಮತಾಂತರ ಆಗಿದ್ದಾರೆ? ಎಂಬುದನ್ನೂ ತನಿಖೆ ಮಾಡಲಿ ಎಂದು ಹೇಳಿದರು. ಮೊದಲು ಚರ್ಚ್ ಟಾರ್ಗೆಟ್ ಮಾಡಿದರು, ಚರ್ಚ್ ಧ್ವಂಸ ಮಾಡಿದರು, ಈಗ ನಮ್ಮ ಶಿಕ್ಷಣ ಸಂಸ್ಥೆಗಳ ಮೇಲೆ ಕಣ್ಣಿಟ್ಟಿದ್ದಾರೆ. ಎಲ್.ಕೆ. ಅಡ್ವಾಣಿ, ಪಿಯೂಷ್ ಗೋಯೆಲ್ ಸೇರಿದಂತೆ ನಾಡಿಗೆ ಹಲವು ಗಣ್ಯರನ್ನು ಕೊಟ್ಟ ಹೆಗ್ಗಳಿಕೆ ಕ್ರೈಸ್ತ ಶಿಕ್ಷಣ ಸಂಸ್ಥೆಗಳಿಗಿದೆ ಎಂದರು.
ಕ್ಲಾರೆನ್ಸ್ ಶಾಲೆ ಪ್ರಿನ್ಸಿಪಲ್ ಜೆರ್ರಿ ಜಾರ್ಜ್ ಪ್ರತಿಕ್ರಿಯಿಸಿ, ಕ್ಲಾರೆನ್ಸ್ ಶಾಲೆ ಅನುದಾನ ರಹಿತ ಶಾಲೆ. ಇದೊಂದು ಕ್ರೈಸ್ತ ಟ್ರಸ್ಟ್ನಿಂದ ಅಲ್ಪಸಂಖ್ಯಾತರು ನಡೆಸುವ ಶಾಲೆ. ನಮ್ಮಲ್ಲಿ ಕ್ರೈಸ್ತರಂತೆ ಇತರ ಧರ್ಮದ ಮಕ್ಕಳು ಕೂಡ ಇದ್ದಾರೆ. ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಶಿಕ್ಷಣದ ಜೊತೆ ನೈತಿಕ ಮೌಲ್ಯಗಳು, ಕ್ರೀಡೆ ಸೇರಿದಂತೆ ಅವರ ಪ್ರತಿಭೆಗೆ ಪ್ರೋತ್ಸಾಹ ಕೊಡಲಾಗುತ್ತದೆ ಎಂದರು.
ಇದನ್ನೂ ಓದಿ: 'ಹಿಂದಿ ರಾಷ್ಟ್ರೀಯ ಭಾಷೆ ಅಂತ ಯಾರೂ ಹೇಳಿಲ್ಲ, ಯಾವ ಭಾಷೆಯನ್ನೂ ಹೇರಿಕೆ ಮಾಡಲ್ಲ'
ನಮ್ಮ ಶಾಲೆಯಲ್ಲಿ ಕಲಿತ ಮಕ್ಕಳು ಈಗ ದೇಶದ ಮಿಲಿಟರಿ, ನೇವಿ, ರಾಜಕೀಯ ಹಲವು ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ನಾವು ಧರ್ಮ, ಬಣ್ಣ, ಜಾತಿ ಯಾವುದನ್ನು ಪರಿಗಣಿಸುವುದಿಲ್ಲ. ಕ್ರೈಸ್ತ ದೇವನ ಚರಿತ್ರೆಯಿಂದ ಮಕ್ಕಳಿಗೆ ವಾರಕ್ಕೊಮ್ಮೆ ಮಾರಲ್ ಶಿಕ್ಷಣ ಕೊಡಲಾಗುತ್ತಿದೆ. ಅಡ್ಮಿಷನ್ಗೂ ಮೊದಲೇ ಈ ವಿಚಾರವನ್ನು ನಾವು ಪೋಷಕರಿಗೆ ತಿಳಿಸಿರುತ್ತೇವೆ. ಸದ್ಯ ಕೆಲ ಸಂಘಟನೆಗಳು ಮಾಡಿದ ಆರೋಪದಲ್ಲಿ ಹುರುಳಿಲ್ಲ ಎಂದು ಹೇಳಿದರು. ಇನ್ನೂ ನಾವು ಈ ನೆಲದ ಕಾನೂನಿಗೆ ಬದ್ಧವಾಗಿಯೇ ಸೇವೆ ಮಾಡುತ್ತಿದ್ದೇವೆ. ಶಿಕ್ಷಣ ಇಲಾಖೆಯಿಂದ ಶೋಕಾಸ್ ನೋಟಿಸ್ ಬಂದಿದೆ. ಅದಕ್ಕೆ ನಾವು ಉತ್ತರಿಸುತ್ತೇವೆ ಎಂದರು.