ಬೆಂಗಳೂರು: 2013ರಲ್ಲಿ ಸಹಾಯಕ ಪಬ್ಲಿಕ್ ಪ್ರಾಸಿಕ್ಯೂಟರ್ (ಎಪಿಪಿ) ಹುದ್ದೆಗಳ ನೇಮಕಾತಿ ಪರೀಕ್ಷೆಯ ಉತ್ತರ ಪತ್ರಿಕೆ ಪ್ರಮಾಣಿಕೃತ ಪ್ರತಿ ನೀಡುವಂತೆ ರಾಜ್ಯ ಮಾಹಿತಿ ಆಯೋಗ ಹೊರಡಿಸಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ. ಈ ಕುರಿತಂತೆ ರಾಜ್ಯ ಅಭಿಯೋಜನಾ ಇಲಾಖೆ ಸಲ್ಲಿಸಿದ್ದ ತಕರಾರು ಅರ್ಜಿ ವಿಚಾರಣೆ ನಡೆಸಿದ ನ್ಯಾ. ಪಿ. ಕೃಷ್ಣ ಭಟ್ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಪ್ರಕರಣದ ಹಿನ್ನೆಲೆ: 2013ರ ಆಗಸ್ಟ್ 31 ಮತ್ತು ಸೆಪ್ಟೆಂಬರ್ 1ರಂದು ನಡೆದಿದ್ದ ಎಪಿಪಿ ಮತ್ತು ಎಜಿಪಿ ನೇಮಕಾತಿಯ ಮುಖ್ಯ ಪರೀಕ್ಷೆಯನ್ನು ಜಿ. ವಿಜಯ್ ಕುಮಾರ್ ಎಂಬುವರು ಬರೆದಿದ್ದರು. ಈ ಉತ್ತರ ಪತ್ರಿಕೆಯ ಪ್ರಮಾಣಿಕೃತ ಪ್ರತಿ ಕೋರಿ ಎಪಿಪಿ ಮತ್ತು ಎಜಿಪಿ ನೇಮಕಾತಿ ಸಮಿತಿ ಸದಸ್ಯ ಕಾರ್ಯದರ್ಶಿಗೆ ಮಾಹಿತಿ ಹಕ್ಕಿನಡಿ ಅರ್ಜಿ ಸಲ್ಲಿಸಿದ್ದರು. ಸಾರ್ವಜನಿಕ ಸಂಪರ್ಕ ಅಧಿಕಾರಿ ಅರ್ಜಿ ತಿರಸ್ಕರಿಸಿದ ಹಿನ್ನೆಲೆಯಲ್ಲಿ ಅರ್ಜಿದಾರರು ಮಾಹಿತಿ ಹಕ್ಕು ಆಯೋಗದ ಮುಂದೆ ಮೇಲ್ಮನವಿ ಸಲ್ಲಿಸಿದ್ದರು. ಅದೂ ಸಹ ತಿರಸ್ಕಾರಗೊಂಡಾಗ ಆಯೋಗದ ಮುಂದೆ ಎರಡನೇ ಮೇಲ್ಮನವಿ ಸಲ್ಲಿಸಿದ್ದರು.
ಎರಡನೇ ಬಾರಿ ಸಲ್ಲಿಸಿದ್ದ ಮೇಲ್ಮನವಿ ಪುರಸ್ಕರಿಸಿದ್ದ ಆಯೋಗ, ವಿಜಯ್ ಕುಮಾರ್ ಅವರಿಗೆ ಅವರ ಉತ್ತರ ಪತ್ರಿಕೆಯನ್ನು ಒಂದು ಗಂಟೆಕಾಲ ವೀಕ್ಷಿಸಲು ಉಚಿತವಾಗಿ ಅವಕಾಶ ಮಾಡಿಕೊಡಬೇಕು ಎಂದು ಎಪಿಪಿ ಮತ್ತು ಎಜಿಪಿ ನೇಮಕಾತಿ ಸಮಿತಿಗೆ 2016ರ ಜೂನ್ 31ರಂದು ಆದೇಶಿಸಿತ್ತು. ಈ ಆದೇಶ ಪ್ರಶ್ನಿಸಿ ಸಮಿತಿ ಮತ್ತು ಅಭಿಯೋಜನಾ ಇಲಾಖೆಗೆ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಿದ್ದವು.
ವಕೀಲರ ವಾದ-ಪ್ರತಿವಾದ: ಸಮಿತಿ ಪರ ಸರ್ಕಾರಿ ವಕೀಲರು ಹಾಜರಾಗಿ, ಎಪಿಪಿ ಮತ್ತು ಎಜಿಪಿ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ. ಈ ಕುರಿತು ತನಿಖೆ ನಡೆಸುತ್ತಿರುವ ಲೋಕಾಯುಕ್ತ ಪೊಲೀಸರು ಮೂಲ ಉತ್ತರ ಪತ್ರಿಕೆಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.
ಪ್ರಕರಣದ ತನಿಖೆ ಬಾಕಿಯಿರುವಾಗ ಅಭ್ಯರ್ಥಿಯ ಉತ್ತರ ಪತ್ರಿಕೆಯ ಪ್ರಮಾಣೀಕೃತ ಪ್ರತಿಯನ್ನು ಆರ್‌ಟಿಐ ಕಾಯ್ದೆ ಅಡಿ ಒದಗಿಸಿದರೆ ತನಿಖೆಯಲ್ಲಿ ಮಧ್ಯಪ್ರವೇಶಿಸಿದಂತಾಗುತ್ತದೆ. ತನಿಖೆಯಲ್ಲಿ ಹಸ್ತಕ್ಷೇಪ ಮಾಡುವಂತಹ ಆತಂಕವಿದ್ದಾಗ ಆರ್‌ಟಿಐ ಕಾಯ್ದೆ ಅಡಿ ಮಾಹಿತಿ ಒದಗಿಸುವುದಕ್ಕೆ ಕಾಯ್ದೆಯ ಸೆಕ್ಷನ್ 8(1)(ಎಚ್) ಅಡಿಯಲ್ಲಿ ವಿನಾಯ್ತಿ ಇದೆ. ಆದ್ದರಿಂದ ಮಾಹಿತಿ ಹಕ್ಕು ಆಯೋಗದ ಆದೇಶ ರದ್ದುಪಡಿಸಬೇಕು ಎಂದು ಕೋರಿದ್ದರು.
ಮಾಹಿತಿ ಆಯೋಗದ ಪರ ವಕೀಲರು ವಾದಿಸಿ, ವಿಜಯ್ ಕುಮಾರ್ ಅವರು ಕೇವಲ ಉತ್ತರ ಪತ್ರಿಕೆಗಳ ಪ್ರಮಾಣಿಕೃತ ಪ್ರತಿಯನ್ನಷ್ಟೇ ಕೋರಿದ್ದಾರೆ. ಈಗಾಗಲೇ ಮೂಲ ಪ್ರತಿಗಳು ಲೋಕಾಯುಕ್ತ ಪೊಲೀಸರ ಸುಪರ್ದಿಯಲ್ಲಿದೆ. ಪ್ರಮಾಣಿಕೃತ ಪ್ರತಿ ನೀಡುವುದರಿಂದ ತನಿಖೆಯಲ್ಲಿ ಹಸ್ತಕ್ಷೇಪ ಮಾಡಿದಂತಾಗುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು.
ಹೈಕೋರ್ಟ್ ತೀರ್ಪು: ವಾದ-ಪ್ರತಿವಾದ ಆಲಿಸಿದ ಪೀಠ, ಆರ್‌ಟಿಐ ಕಾಯ್ದೆಯ ಸೆಕ್ಷನ್ 8(1)(ಎಚ್) ಪ್ರಕಾರ, ಮಾಹಿತಿ ಹಕ್ಕು ಕಾಯ್ದೆ ಅಡಿ ಕೋರುವ ಮಾಹಿತಿಗಳು ತನಿಖೆಗೆ ಅಡ್ಡಿ ಉಂಟಾಗುತ್ತದೆ ಎಂಬ ಆತಂಕವಿದ್ದಾಗ ಮಾಹಿತಿ ನಿರಾಕರಿಸಬಹುದು.
ಆದರೆ, ಈ ಪ್ರಕರಣದಲ್ಲಿ ವಿಜಯ್ ಕುಮಾರ್ ಸೇರಿದಂತೆ ಎಲ್ಲಾ ಅಭ್ಯರ್ಥಿಗಳ ಮೂಲ ಉತ್ತರ ಪತ್ರಿಕೆಗಳನ್ನು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೀಗಿರುವಾಗ ಉತ್ತರ ಪತ್ರಿಕೆಗಳ ನಕಲು ಪ್ರತಿಯನ್ನು ಪ್ರಮಾಣೀಕರಿಸಿ ನೀಡಿದರೆ ತನಿಖೆಯಲ್ಲಿ ಮಧ್ಯಪ್ರವೇಶ ಮಾಡಿದಂತಾಗುವುದಿಲ್ಲ.
ಮೇಲಾಗಿ, ವಿಜಯ್ ಕುಮಾರ್ ತಮ್ಮ ಉತ್ತರ ಪತ್ರಿಕೆಯನ್ನಷ್ಟೇ ಕೇಳಿದ್ದಾರೆ. ಇತರೆ ಯಾವುದೇ ಅಭ್ಯರ್ಥಿಯ ಉತ್ತರ ಪತ್ರಿಕೆಯನ್ನು ಕೇಳಿಲ್ಲ. ಹೀಗಾಗಿ ಮಾಹಿತಿ ಹಕ್ಕು ಆಯೋಗದ ಆದೇಶ ಸೂಕ್ತವಾಗಿದ್ದು, ಅದರಲ್ಲಿ ಮಧ್ಯಪ್ರವೇಶಿಸುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.
ಇದನ್ನೂ ಓದಿ:'ಹಿಂದಿ ರಾಷ್ಟ್ರೀಯ ಭಾಷೆಯಲ್ಲ' ಎಂದ ಸುದೀಪ್‌ಗೆ ಅಜಯ್ ದೇವಗನ್ ಖಾರ ಪ್ರತಿಕ್ರಿಯೆ; ನೆಟ್ಟಿಗರಿಂದ ತರಾಟೆ