ಬೆಂಗಳೂರು : 1-5ನೇ ತರಗತಿಯಲ್ಲಿ ಬೋಧಿಸುವ ಶಿಕ್ಷಕರಿಗೆ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಪದೋನ್ನತಿ ನೀಡುವ ಸಂಬಂಧ ಕೆಎಟಿ ತೀರ್ಪಿನ ಹಿನ್ನೆಲೆಯಲ್ಲಿ ಕೂಡಲೇ ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಕ್ರಮ ವಹಿಸಲು ಶಿಕ್ಷಣ ಸಚಿವ ಸುರೇಶ್ ಕುಮಾರ್ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
ಪ್ರಾಥಮಿಕ ಶಾಲಾ ಶಿಕ್ಷಕರು (1ರಿಂದ 5ನೇ ತರಗತಿಗಳಿಗೆ ಬೋಧಿಸುವ) ಪ್ರೌಢ ಶಾಲಾ ಸಹ ಶಿಕ್ಷಕ ಗ್ರೇಡ್-2 ಹುದ್ದೆಗಳಿಗೆ ಬಡ್ತಿ ಪಡೆಯಲು ಅರ್ಹರಲ್ಲ ಎಂದು ಕರ್ನಾಟಕ ಆಡಳಿತಾತ್ಮಕ ನ್ಯಾಯ ಮಂಡಳಿ (ಕೆಎಟಿ) ಆದೇಶಿಸಿದೆ. ಹೀಗಾಗಿ, ಉಚ್ಚ ನ್ಯಾಯಾಲಯದಲ್ಲಿ ಮೇಲ್ಮನವಿ ಸಲ್ಲಿಸಲು ಕ್ರಮವಹಿಸಲು ಶಿಕ್ಷಣ ಸಚಿವರು ಇಲಾಖಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಯಾವುದೇ ಶಿಕ್ಷಕರಿಗೂ ತೊಂದರೆಯಾಗದ ರೀತಿ ಪೂರ್ವಭಾವಿ ಕ್ರಮಗಳನ್ನು ಚಾಲ್ತಿಯಲ್ಲಿಡುವುದು. ವೃಂದ ನೇಮಕಾತಿ ನಿಯಮಗಳಿಗೆ ತಿದ್ದುಪಡಿ ಪ್ರಸ್ತಾವನೆಗೆ ಈಗಾಗಲೇ ಸೂಚಿಸಲಾಗಿದೆ. ಅದರ ಪ್ರಸ್ತುತ ಹಂತವನ್ನು ವಿವರಿಸುವುದರ ಜೊತೆಯಲ್ಲಿ, ಕೂಡಲೇ ಅಗತ್ಯ ತಿದ್ದುಪಡಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ತಿಳಿಸಿದ್ದಾರೆ.
ಕೆಎಟಿ ಆದೇಶದಲ್ಲಿನ ಅಂಶಗಳು ಏನ್ ಇತ್ತು?
- ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಸೇವಾ ಹಿರಿತನದಲ್ಲಿ ಪ್ರೌಢ ಶಾಲಾ ಸಹ ಶಿಕ್ಷಕ ಗ್ರೇಡ್- 2 ಹುದ್ದೆಗೆ ಬಡ್ತಿ ನೀಡಲು ಸಾಧ್ಯವಿಲ್ಲ. ಏಕೆಂದರೆ, ಈ ಹುದ್ದೆಗಳು ಪ್ರಾಥಮಿಕ ಶಾಲಾ ಸಹ ಶಿಕ್ಷಕರ ಶ್ರೇಣಿಯ ನಂತರದ ಶ್ರೇಣಿಯ ಹುದ್ದೆಗಳಲ್ಲ. ಹಾಗೆಯೇ, ಪ್ರಾಥಮಿಕ ಶಾಲಾ ಶಿಕ್ಷಕರು ಮತ್ತು ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ವಿಭಿನ್ನ ಶ್ರೇಣಿಗಳು.
- ಪ್ರಾಥಮಿಕ ಶಾಲಾ ಶಿಕ್ಷಕರಿಗೆ ಪ್ರೌಢ ಶಾಲಾ ಸಹ ಶಿಕ್ಷಕ ಗ್ರೇಡ್-2 ಹುದ್ದೆಗಳಿಗೆ ಬಡ್ತಿ ನೀಡಿದ್ದಲ್ಲಿ ತಕ್ಷಣ ಅಂತಹ ಶಿಕ್ಷಕರಿಗೆ ನೋಟಿಸ್ ನೀಡಿ, ಬಡ್ತಿ ಹಿಂಪಡೆಯಬೇಕು.
- ವೃಂದ ಮತ್ತು ನೇಮಕಾತಿ ನಿಯಮಗಳ ಪ್ರಕಾರ ಪ್ರೌಢ ಶಾಲಾ ಸಹಶಿಕ್ಷಕ ಗ್ರೇಡ್ -2 ಶ್ರೇಣಿಗೆ 6ರಿಂದ 8ನೇ ತರಗತಿ ಬೋಧಿಸುವ ಪದವೀಧರ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರು ಮಾತ್ರ ಅರ್ಹರು.
- ಪ್ರೌಢ ಶಾಲಾ ಸಹಶಿಕ್ಷಕ ಗ್ರೇಡ್-2ಗೆ ಬಡ್ತಿ ನೀಡುವ ಪ್ರಕ್ರಿಯೆಯಲ್ಲಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರ ಸೇವಾ ಹಿರಿತನವನ್ನ ಪರಿಗಣಿಸಬೇಕು.
- ಈ ಆದೇಶ ರಾಜ್ಯದ ಎಲ್ಲ ಜಿಲ್ಲೆಗಳ ಶಿಕ್ಷಕ ವರ್ಗಕ್ಕೆ ಮತ್ತು ಅವರ ಬಡ್ತಿಗೆ ಅನ್ವಯವಾಗಲಿದೆ.
- ಅಜಿರ್ದಾರ ಶಿಕ್ಷಕರು ವೃಂದ ಮತ್ತು ನೇಮಕಾತಿ ನಿಯಮಗಳ ಅಡಿಯಲ್ಲಿ ಪ್ರೌಢ ಶಾಲಾ ಸಹ ಶಿಕ್ಷಕರ ಹುದ್ದೆಗಳಿಗೆ ಬಡ್ತಿ ಪಡೆಯಲು ಅರ್ಹರಿದ್ದಲ್ಲಿ, ರಾಜ್ಯದಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅವರನ್ನು ಪರಿಗಣಿಸಬೇಕು.