ದೇವನಹಳ್ಳಿ : ಗ್ರಾಹಕರಿಗೆ ಅಂತಾರಾಷ್ಟ್ರೀಯ ಗುಣಮಟ್ಟದ ಸೇವೆಯನ್ನು ನೀಡುತ್ತಿರುವ ಕೆಐಎಎಲ್ (ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ) ಆಗಮನ ಮತ್ತು ನಿರ್ಗಮನ ಎರಡರಲ್ಲೂ ಪ್ರಶಸ್ತಿ ಪಡೆಯತ್ತಿರುವ ಜಾಗತಿಕ ಏಕೈಕ ವಿಮಾನ ನಿಲ್ದಾಣವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಸತತ ಎರಡನೇ ವರ್ಷವೂ ಎಸಿಐ-ಎಎಸ್‍ಕ್ಯೂ ಪ್ರಶಸ್ತಿ ತನ್ನದಾಗಿಸಿ ಕೊಂಡಿದೆ. ಏಷಿಯಾ-ಫೆಸಿಪಿಕ್ ವಿಭಾಗದಲ್ಲಿ 2.5 ಕೋಟಿಯಿಂದ 4 ಕೋಟಿ ಪ್ರಯಾಣಿಕರನ್ನು ನಿರ್ವಹಿಸುವ ವಿಮಾನ ನಿಲ್ದಾಣಗಳ ಪೈಕಿ ‘ಗಾತ್ರ ಮತ್ತು ವಲಯ’, ‘ಉತ್ತಮ ವಾತಾವರಣ’, ‘ಉತ್ತಮ ಗ್ರಾಹಕ ಸೇವೆ’ ಮತ್ತು ‘ಮೂಲಸೌಕರ್ಯ ಒದಗಿಸುವುದು’ ಸೇರಿ ಒಟ್ಟು ಐದು ವಿಭಾಗಗಳಲ್ಲಿ ಪ್ರಶಸ್ತಿ ಲಭಿಸಿದೆ. 2018ನೇ ಸಾಲಿನಲ್ಲೂ ‘ಏರ್‌ಪೋರ್ಟ್ ಕೌನ್ಸಿಲ್ ಇಂಟರ್‌ನ್ಯಾಷನಲ್‌ನ ಏರ್‌ಪೋರ್ಟ್ ಸರ್ವಿಸ್ ಕ್ವಾಲಿಟಿ ಅವಾರ್ಡ್ -2019’ ಕೆಐಎಗೆ ಲಭಿಸಿತ್ತು. ನಿರ್ಗಮನ ಮತ್ತು ಆಗಮನಗಳೆರಡಕ್ಕೂ ಪ್ರಶಸ್ತಿ ಗೆದ್ದುಕೊಂಡ ಜಗತ್ತಿನ ಏಕೈಕ ವಿಮಾನ ನಿಲ್ದಾಣವಾಗುವುದರೊಂದಿಗೆ ಈ ಪ್ರಶಸ್ತಿಗಳು ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹಿರಿಮೆ ಹೆಚ್ಚಾಗಿದೆ.
2019 ರಲ್ಲಿ ನಾವು 33 ದಶಲಕ್ಷ ಪ್ರಯಾಣಿಕರಿಗೆ ಸೇವೆ ನೀಡಿದ್ದೇವೆ. ನೂತನ ಮೂಲಸೌಕರ್ಯ ನಿರ್ಮಾಣ ಕಾರ್ಯದಲ್ಲಿ ಅಡ್ಡಿ ಇದ್ದರೂ ಕೂಡ ಈ ಗಮನಾರ್ಹ ಸಂಖ್ಯೆಯಲ್ಲಿನ ಪ್ರಯಾಣಿಕರ ಹೆಚ್ಚಳವನ್ನು ನಿಭಾಯಿಸಿರುವ ನಮ್ಮ ತಂಡ ಗ್ರಾಹಕರಿಗೆ ಪ್ರಶಸ್ತಿ ವಿಜೇತ ಅನುಭವದ ಖಾತ್ರಿ ನೀಡಿದೆ. ಮುಂದಿನ ದಿನಗಳಲ್ಲಿ ಟೋಕಿಯಾ, ಸಿಯಾಟಲ್ ಸೇರಿದಂತೆ ಹೆಚ್ಚಿನ ಅಂತಾರಾಷ್ಟ್ರೀಯ ಸ್ಥಳಗಳಿಗೆ ಸಂಪರ್ಕವನ್ನು ಬೆಂಗಳೂರು ವಿಮಾನ ನಿಲ್ದಾಣದಿಂದ ನೀಡಲಾಗುವುದು ಎಂದು ವ್ಯವಸ್ಥಾಪಕ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರಿಮಾರರ್ ತಿಳಿಸಿದ್ದಾರೆ.
ಎಎಸ್‍ಕ್ಯೂ ಜಗತ್ತಿನ ಮುಂಚೂಣಿಯ ವಿಮಾನ ನಿಲ್ದಾಣ ಪ್ರಯಾಣಿಕರ ಸೇವೆ ಮತ್ತು ಮಾನದಂಡ ಕಾರ್ಯಕ್ರಮವಾಗಿದ್ದು, ಪ್ರಯಾಣಿಕರು ವಿಮಾನ ನಿಲ್ದಾಣವೊಂದರ ಮೂಲಕ ಸಾಗುವಾಗ ಅವರ ತೃಪ್ತಿಯನ್ನು ಅಳೆಯುತ್ತದೆ. ಈ ಮೌಲ್ಯೀಕರಣದಲ್ಲಿ 90 ದೇಶಗಳ ಸುಮಾರು 350 ವಿಮಾನ ನಿಲ್ದಾಣಗಳು ಭಾಗವಹಿಸಿದ್ದವು. ಎಎಸ್‍ಕ್ಯೂ ನಿರ್ಗಮನ ಕಾರ್ಯಕ್ರಮ ಪ್ರಯಾಣಿಕರ ತೃಪ್ತಿಯನ್ನು 36 ಮುಖ್ಯವಾದ ಸೂಚಕಗಳಲ್ಲಿ ಅಳೆಯುತ್ತದೆ. ಇದರಲ್ಲಿ ವಿಮಾನ ನಿಲ್ದಾಣಕ್ಕೆ ಸಂಪರ್ಕ, ಚೆಕ್-ಇನ್, ಭದ್ರತೆ, ಮಾರ್ಗ ಹುಡುಕಿಕೊಳ್ಳುವುದು, ಸಿಬ್ಬಂದಿಯ ಸೌಜನ್ಯ ಮತ್ತು ಸ್ನೇಹಮಯ ನಡವಳಿಕೆ, ಸ್ವಚ್ಛತೆ, ಸೇವೆಗಳ ಗುಣಮಟ್ಟ ಮುಂತಾದವುಗಳು ಸೇರಿವೆ.