ಆನೇಕಲ್: ಬೆಂಗಳೂರಿನಲ್ಲಿನ ಚಾಮರಾಜಪೇಟೆಯಲ್ಲಿನ ಬಲಿಜ ಸಮುದಾಯಕ್ಕೆ ಸೇರಿದ ಜಾಗವನ್ನು ಶಿವರಾಮೇಗೌಡರು ಟ್ರಸ್ಟ್ ಪದಾಧಿಕಾರಿಗಳನ್ನ ವಂಚಿಸಿ ತೆಕ್ಕೆಗೆ ತೆಗೆದುಕೊಳ್ಳಲು ಹವಣಿಸಿದ್ದಲ್ಲದೆ ಸಮುದಾಯದ ಮುಖಂಡರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಲು ಪ್ರಭಾವ ಬೀರಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಯಿತು.
ಆನೇಕಲ್ ತಾಲೂಕು ಕಚೇರಿ ಮುಂಭಾಗ ಪ್ರತಿಭಟನೆ ವೇಳೆ ಮಾತನಾಡಿದ ಮುಖಂಡರು, ರಾಜ್ಯಾದ್ಯಂತ ತಾಲೂಕು ಕೇಂದ್ರಗಳಲ್ಲಿ ಬಲಿಜ ಸಮುದಾಯದವರಿಂದ ಪ್ರತಿಭಟನೆ ಮೂಲಕ ಮಾಜಿ ಸಂಸದರಿಗೆ ಎಚ್ಚರಿಕೆ ನೀಡಲಾಗುತ್ತಿದೆ ಎಂದರು. ಅಲ್ಲದೆ ಜಾಗಕ್ಕೆ ಬಾಡಿಗೆ ಕಟ್ಟಬೇಕಾಗಿರುವ ಮೊತ್ತವೇ ಹತ್ತಾರು ಕೋಟಿ ದಾಟಿದೆ. ಬಾಡಿಗೆ ಕೇಳಿದ್ದಕ್ಕೆ ಬೆದರಿಸುವ ತಂತ್ರವನ್ನು ಬಲಿಜ ಸಮುದಾಯದ ಮೇಲೆ ಬೀರುತ್ತಿದ್ದಾರೆ. ಸುಳ್ಳು ದೂರು ನೀಡಿ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಸಮುದಾಯಕ್ಕೆ ಧಮ್ಕಿ ಹಾಕುತ್ತಿದ್ದಾರೆಂದು ದೂರಿದರು.
ಶಿವರಾಮೇಗೌಡರು ಮೂವತ್ತು ವರ್ಷಕ್ಕೆ ಬಲಿಜ ಸಮುದಾಯ ಟ್ರಸ್ಟ್ನ ಜಾಗವನ್ನು ಬೋಗ್ಯಕ್ಕೆ ಪಡೆದಿದ್ದರು. ಅನಂತರ ಬಾಡಿಗೆ ನೀಡಬೇಕಿತ್ತು. ಬಲಿಜ ಟ್ರಸ್ಟಿನ ಕೆಲ ಪದಾಧಿಕಾರಿಗಳನ್ನು ವಂಚಿಸಿ ನಕಲಿ ಬೋಗ್ಯ ಪತ್ರ ಸೃಷ್ಟಿಸಿ ಪತ್ರದಲ್ಲಿ ತೋರಿಸಿಲ್ಲದ ಜಾಗಕ್ಕೆ ಕಣ್ಣು ಹಾಕಿ ಬೆದರಿಸಿ ಭೂಮಿ ವಶಪಡಿಸಿಕೊಳ್ಳುವ ತವಕದಲ್ಲಿದ್ದಾರೆ ಎಂದು ಬಲಿಜ ಸಮುದಾಯದ ಮುಖಂಡರು ಆರೋಪಿಸಿದರು.