ಬೆಂಗಳೂರು: ಹಲವು ವರ್ಷಗಳಿಂದ ಅರಣ್ಯ ಇಲಾಖೆ ಪದೋನ್ನತಿ ಪಟ್ಟಿ ಬಾಕಿ ಉಳಿದಿದೆ. ಇದಕ್ಕಾಗಿ ವಿವಿಧ ಇಲಾಖೆಯ ತಜ್ಞರ ಸಮಿತಿ ರಚಿಸಿ ನಾಲ್ಕು ತಿಂಗಳ ಕಾಲ ಅಧ್ಯಯನ ನಡೆಸಿದ್ದೇವೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ತಿಳಿಸಿದ್ದಾರೆ.
ಜೆಡಿಎಸ್ ಸದಸ್ಯ ಅಪ್ಪಾಜಿ ಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿ, ನನಗೆ ತಾವು ಕೇಳಿದ ಪ್ರಶ್ನೆಗೆ ಇನ್ನಷ್ಟು ಸ್ಪಷ್ಟೀಕರಣ ನೀಡುವ ಅಗತ್ಯ ಇಲ್ಲ. 540 ಆಕ್ಷೇಪಣೆ ಬಂದಿತ್ತು. 13 ವೃತ್ತದಿಂದ ಬಂದ ದೂರಿನ ಕುರಿತು ಸ್ಪಷ್ಟೀಕರಣ ನೀಡಲಾಗಿದೆ. ಸಮಿತಿ ವತಿಯಿಂದ ದೂರು ಸಂಬಂಧ ಸೂಕ್ತ ಕ್ರಮಕ್ಕೆ ಸೂಚಿಸಿದ್ದೇವೆ. ಪದೋನ್ನತಿ ಮೂರ್ನಾಲ್ಕು ವರ್ಷದಿಂದ ನಿಂತಿತ್ತು. ಈ ಹಿಂದೆಯೇ ಒಂದು ಪಟ್ಟಿ ಸಿದ್ಧಪಡಿಸಬೇಕೆಂದು ತಾವು ಹೇಳಿದ್ದಿರಿ. ಅದನ್ನು ಮಾಡಿದ್ದು, ತಮಗೆ ಕೊಟ್ಟ ಉತ್ತರದಲ್ಲಿ ಇರುವ ಗೊಂದಲ ನಿವಾರಿಸುತ್ತೇನೆ. ತಾವು ಕೇಳಿದ ಪ್ರಶ್ನೆ ಉತ್ತಮವಿದ್ದು, ಪ್ರತ್ಯೇಕವಾಗಿ ನಿಮ್ಮೊಂದಿಗೆ ಚರ್ಚಿಸುತ್ತೇನೆ ಎಂದು ಭರವಸೆ ನೀಡಿದರು.
ಸದಸ್ಯ ಅಪ್ಪಾಜಿ ಗೌಡ ಮಾತನಾಡಿ, ನಾನು ಕೇಳಿದ ಪ್ರಶ್ನೆಯನ್ನು ಅಧಿಕಾರಿಗಳು ತಿರುಚಿ ಉತ್ತರ ನೀಡಿದ್ದಾರೆ. ಸೂಕ್ತ ಉತ್ತರ ಬೇಕು ಎಂದರು.
ಅಗತ್ಯ ಆಧರಿಸಿ ಅತಿಥಿ ಶಿಕ್ಷಕರ ನೇಮಕ
ಬಿಜೆಪಿ ಸದಸ್ಯ ಶಶಿಲ್ ಜಿ. ನಮೋಶಿ ಪ್ರಶ್ನೆಗೆ ಸಚಿವ ಸುರೇಶ್ ಕುಮಾರ್ ಉತ್ತರಿಸಿ, ಶಾಲೆ, ಕಾಲೇಜು ಆರಂಭದಲ್ಲಿ ಅಗತ್ಯ ಆಧರಿಸಿ, ಮಕ್ಕಳ ಸಂಖ್ಯೆ ಆಧರಿಸಿ ಅತಿಥಿ ಶಿಕ್ಷಕರನ್ನು ತೆಗೆದುಕೊಳ್ಳುತ್ತೇವೆ. ಸದ್ಯ ಯಾವುದೇ ಕಡೆ ಶಾಲೆ ಆರಂಭವಾಗದ ಹಿನ್ನೆಲೆ ಅತಿಥಿ ಶಿಕ್ಷಕರು, ಉಪನ್ಯಾಸಕರನ್ನು ಪಡೆಯುವ ಅಗತ್ಯ ಎದುರಾಗಿಲ್ಲ ಎಂದರು.
ಶಶಿಲ್ ಜಿ. ನಮೋಶಿ ಮಾತನಾಡಿ, ಕಳೆದ 5 ತಿಂಗಳಿಂದ ಶಿಕ್ಷಕರಿಗೆ ವೇತನ ನೀಡಿಲ್ಲ. ಮಾರ್ಚ್ನಲ್ಲಿ ಕೋವಿಡ್ ಬಂದಿದ್ದು ತಿಳಿದ ವಿಚಾರ. ಆರಂಭದ ಕೆಲ ತಿಂಗಳು ಆನ್ಲೈನ್ ಕ್ಲಾಸ್ ಪಡೆದಿದ್ದು, ಅತಿಥಿ ಉಪನ್ಯಾಸಕರ ಸೇವೆ ಇತ್ತು. ಯಾಕೆ ಇವರ ಸೇವೆ ಮುಂದುವರೆಸಿಲ್ಲ. ಇವರ ಸೇವೆ ಬಳಸಿಕೊಳ್ಳಬೇಕು ಎಂದು ಸಲಹೆ ಇತ್ತರು.