ಬೆಂಗಳೂರು : ನಾನು ಯಾವುದೇ ಗಣಿ ಕಂಪನಿಯ ಮಾಲೀಕನಲ್ಲ. ನಮ್ಮ ತಂದೆಯ ಹೆಸರು ಮಾತ್ರ ಇತ್ತು. ಚುನಾವಣಾ ಆಯೋಗಕ್ಕೂ ಪ್ರಮಾಣ ಪತ್ರ ಸಲ್ಲಿಸಿದ್ದೇನೆ. ನನ್ನ ತಂದೆ ನಿವೃತ್ತಿ ಆದ ಮೇಲೆ ನಾನು ಕೆಲಸ ವಹಿಸಿಕೊಂಡೆ ಎಂದು ಅರಣ್ಯ ಸಚಿವ ಆನಂದ್ ಸಿಂಗ್ ಸ್ಪಷ್ಪನೆ ನೀಡಿದ್ದಾರೆ.
ವಿಧಾನಸೌದದಲ್ಲಿ ಇಂದು ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಾನು ಹೋಗಿ ಬೌಂಡರಿ ಕಲ್ಲು ತೆಗೆದೆ, ಮರ ಕಡಿದೆ ಅಂತಾರೆ. ನಮ್ಮ ಹಿರಿಯರು ಗಣಿಗಾರಿಕೆ ನಡೆಸಿಕೊಂಡು ಬಂದಿದ್ದಾರೆ. ನನ್ನ ಮೇಲೆ ನೇರ ಅರಣ್ಯ ನಾಶದ ಆರೋಪ ಇಲ್ಲ. ಯಾರದ್ದೋ ಪ್ರಕರಣದಲ್ಲಿ ನನ್ನ ಹೆಸರು ಸೇರಿಸಲಾಗಿದೆ. ಈ ಆರೋಪಗಳಿಗಾಗಿ ನನ್ನ ಅರಣ್ಯ ಖಾತೆ ಹಿಂಪಡೆಯಲು ಬಯಸಿದರೆ ಬಿಟ್ಟು ಕೊಡಲು ಸಿದ್ಧ ಎಂದು ಸ್ಪಷ್ಟಪಡಿಸಿದರು.
ರಾಜಕೀಯ ಪಿತೂರಿಯಿಂದ ನನ್ನ ಹೆಸರನ್ನು ಪ್ರಕರಣದಲ್ಲಿ ಸೇರಿಸಿದ್ದಾರೆ. ನಾನು ಯಾವುದೇ ಗಣಿ ಕಂಪನಿಯ ಮಾಲೀಕನಲ್ಲ. ಪ್ರತಿಪಕ್ಷ ನಾಯಕರ ಆರೋಪ ಸರಿಯಾಗಿಯೇ ಇದೆ. ನನ್ನ ಮೇಲೆ 15 ಪ್ರಕರಣ ಇರುವುದು ನಿಜ. ರಾಜ್ಯದ ಜನರನ್ನು ಕತ್ತಲೆಯಲ್ಲಿ ಇಡುವುದಿಲ್ಲ. ಅವರೆಲ್ಲ ನನ್ನ ಮೇಲಿನ ಚಾರ್ಜ್ ಶೀಟ್ ಗಳನ್ನು ನೋಡಲಿ. ನನ್ನ ಮೇಲೆ ನೇರವಾದ ಆರೋಪ ಇದ್ದರೆ ಹೇಳಲಿ ಎಂದು ಪ್ರಶ್ನಿಸಿದರು.
ನನ್ನ ಮೇಲೆ ನೇರವಾಗಿ ಅರಣ್ಯ ನಾಶದ ಆರೋಪ ಇಲ್ಲ. ಯಾರದ್ದೋ ಪ್ರಕರಣದಲ್ಲಿ ನನ್ನದೂ ಹೆಸರಿದೆ ರಾಜಕೀಯ ಪಿತೂರಿಯ ಕಾರಣ ನಮ್ಮ ಹೆಸರು ಸೇರಿಸಿದರು ಅಂತ ಹೇಳಬಹುದು. ದೇವರಿದ್ದಾನೆ, ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದು ಹೇಳಿದರು.
ಆರೋಪ ಇರುವುದು ನಿಜ. ತಪ್ಪು ಮಾಡಿದ ಮೇಲೆ ಬದಲಾಗಬಾರದಾ?. ತಪ್ಪು ಮಾಡಿದವನು ಹಾಗೆಯೇ ಇರಬೇಕಾ?. ಮಹರ್ಷಿ ವಾಲ್ಮೀಕಿ ಬದಲಾಗಿ ರಾಮಾಯಣ ಬರೆದಿಲ್ಲವೇ?. ಖಾತೆ ಬದಲಾವಣೆ ಮಾಡುವುದಾದರೆ ಮಾಡಲಿ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ರಾಜಕೀಯದಲ್ಲಾದ ಅನುಭವದಷ್ಟೂ ನನಗೆ ವಯಸಾಗಿಲ್ಲ. ಅವರು ಬೆಳೆದಷ್ಟು ತಾವು ಬೆಳೆಯಲು ಆಗುವುದಿಲ್ಲ. ಅವರ ಮಾತುಗಳಿಗೆ ಉತ್ತರ ನೀಡುವಷ್ಟು ದೊಡ್ಡವನಾನಲ್ಲ. ಅವರ ಆರೋಪ ಸರಿಯಾಗಿದೆ ಎಂದರು.