ಬೆಂಗಳೂರು: ಹಾಸನ ಜಿಲ್ಲೆ ಚನ್ನರಾಯ ಪಟ್ಟಣದ ರಾಯಸಂದ್ರದಲ್ಲಿ ಅಮೃತ ಮಹಲ್ ಹಸುಗಳು ಮಳೆಗೆ ಸಂಕಷ್ಟಕ್ಕೆ ಸಿಲುಕಿದ್ದಾಗ ಕರ್ತವ್ಯ ಲೊಪ ಎಸಗಿದ್ದ ಹಿನ್ನೆಲೆ ಪಶು ವೈದ್ಯಾಧಿಕಾರಿಯನ್ನು ಅಮಾನತು ಮಾಡಿ ಸರ್ಕಾರ ಆದೇಶ ಹೊರಡಿಸಿದೆ.
ಚನ್ನರಾಯಪಟ್ಟಣ ತಾಲೂಕಿನ ನುಗ್ಗೆಹಳ್ಳಿಯ ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ಎಲ್.ಜಿ ಸೋಮಶೇಖರ್ ರನ್ನು ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಆದೇಶದಲ್ಲಿ ಮುಖ್ಯ ಪಶುವೈದ್ಯಾಧಿಕಾರಿ ಸತತ ಮಳೆ ಬಂದು ಅಮೃತ ಮಹಲ್ ಹಸುಗಳ ಶೆಡ್ನಲ್ಲಿ ನೀರು ತುಂಬಿದರೂ, ಆ ಬಗ್ಗೆ ಗಮನ ಹರಿಸಿಲ್ಲ. ಶೆಡ್ ತಗ್ಗು ಪ್ರದೇಶದಲ್ಲಿ ಇದ್ದು, ನೀರು ಹೊರ ಹೋಗಲು ಡ್ರೈನೇಜ್ ವ್ಯವಸ್ಥೆ ಮಾಡದಿರುವುದು, ಅಲ್ಲಿರುವ ಹಸುಗಳಿಗೆ ಆಹಾರ, ಮೇವು, ನೀರು, ಔಷಧೋಪಚಾರಗಳನ್ನು ಮಾಡದೇ ಇರುವುದು ಕಂಡು ಬಂದಿದೆ. ಈ ಬಗ್ಗೆ ಯಾವುದೇ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿರುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ ಎಂದು ತಿಳಿಸಲಾಗಿದೆ.
ಕಳೆದ ವಾರ ಸ್ಥಳಕ್ಕೆ ಭೇಟಿ ನೀಡಿದ್ದ ಪಶು ಸಂಗೋಪನಾ ಸಚಿವ ಪ್ರಭು ಚೌವ್ಹಾಣ್ ತಪ್ಪಿತಸ್ಥ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳಲು ಹಿರಿಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಇದೀಗ ಮುಖ್ಯ ಪಶು ವೈದ್ಯಾಧಿಕಾರಿಯನ್ನು ಇಲಾಖಾ ವಿಚಾರಣೆ ಬಾಕಿ ಇಟ್ಟು, ಅಮಾನತುಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ.