ಬೆಂಗಳೂರು: ನೆರೆ ಪೀಡಿತ ಪ್ರದೇಶಗಳಲ್ಲಿ ಸಂಕಷ್ಟಕ್ಕೆ ಸಿಲುಕಿರುವವರ ನೆರವಿಗೆ ನಾಲ್ಕು ಎನ್ಡಿಆರ್ಎಫ್ ತಂಡ ಕಳಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಒಪ್ಪಿದ್ದು, ಅಗತ್ಯ ನೆರವು ಏನೇ ಇದ್ದರೂ ನೀಡಲು ಸಿದ್ದ ಎಂದು ಭರವಸೆ ನೀಡಿದ್ದಾರೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್ನಲ್ಲಿ ಮಾತನಾಡಿದ ಅವರು, ಇಂದು ಕೇಂದ್ರ ಗೃಹ ಸಚಿವರ ಜೊತೆ ರಾಜ್ಯದ ಪರಿಸ್ಥಿತಿ ಬಗ್ಗೆ ಮಾತುಕತೆ ನಡೆಸಿದ್ದೇನೆ. 51 ತಾಲೂಕುಗಳಲ್ಲಿ ದೊಡ್ಡ ಪ್ರಮಾಣದ ಹಾನಿಗಳಾಗಿವೆ. 45 ಸಾವಿರ ಜನರನ್ನು ಸ್ಥಳಾಂತರಿಸಲಾಗಿದೆ ಎಂಬ ಮಾಹಿತಿ ಸಿಕ್ಕಿದೆ. ರಾಜ್ಯ ಮುಖ್ಯ ಕಾರ್ಯದರ್ಶಿ ಸಹ ಕೇಂದ್ರ ಸಂಪುಟ ಕಾರ್ಯದರ್ಶಿ ಜೊತೆ ಚರ್ಚೆ ಮಾಡಿದ್ದಾರೆ ಎಂದರು.
ಈಗಾಗಲೇ 75 ಕೋಟಿ ರೂ. ಎನ್ಡಿಆರ್ಎಫ್ ಫಂಡ್ ಬಿಡುಗಡೆಯಾಗಿದೆ. ಅಗತ್ಯ ನೆರವು ಏನೇ ಇದ್ದರೂ ನೀಡಲು ಸಿದ್ದ ಎಂದು ಗೃಹ ಸಚಿವರು ಹೇಳಿದ್ದಾರೆ. ನಾಳೆ ಪರಿಸ್ಥಿತಿ ಬಗ್ಗೆ ಮತ್ತೊಮ್ಮೆ ಅಮಿತ್ ಶಾ ಜೊತೆ ಮಾತನಾಡುತ್ತೇನೆ. ರಾಜ್ಯದ ಜನರ ಕಣ್ಣೀರು ಒರೆಸಲು ಕೇಂದ್ರ ಸರ್ಕಾರ ಸಿದ್ದವಿದೆ ಎಂದು ಅಮಿತ್ ಶಾ ಭರವಸೆ ಕೊಟ್ಟಿದ್ದಾರೆ ಎಂದರು.