ಬೆಂಗಳೂರು: ರಾಜ್ಯದಲ್ಲಿ ಮತ್ತೆ ನಾಯಕತ್ವ ಬದಲಾವಣೆ, ಗುಜರಾತ್ ಮಾದರಿ ಸರ್ಕಾರ ರಚನೆ, ಸಚಿವ ಸಂಪುಟ ವಿಸ್ತರಣೆ ಕುರಿತ ಸುದ್ದಿಗಳಿಗೆ ಕಡಿವಾಣ ಹಾಕಲಾಗುತ್ತದೆ ಎನ್ನುವ ಕಾರಣಗಳಿಂದಾಗಿ ಮಹತ್ವದ ಪಡೆದುಕೊಂಡಿದ್ದ ರಾಜ್ಯ ಬಿಜೆಪಿ ನಾಯಕರ ಸಭೆಯನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ರದ್ದುಪಡಿಸಿದ್ದಾರೆ.
ಇಂದು ಸಂಜೆ 4 ರಿಂದ 5 ಗಂಟೆವರೆಗೆ ಖಾಸಗಿ ಹೋಟೆಲ್ನಲ್ಲಿ ಸಭೆ ನಡೆಸಲು ಸಿದ್ದತೆ ನಡೆದಿತ್ತು. ಕೋರ್ ಕಮಿಟಿಯ 16 ಸದಸ್ಯರು, 30 ಪದಾಧಿಕಾರಿಗಳು, ನಾಲ್ವರು ವಿಭಾಗವಾರು ಪ್ರತಿನಿಧಿಗಳು ಸೇರಿ 50 ಮಂದಿ ಪ್ರಮುಖರ ಜೊತೆ ಮಹತ್ವದ ಸಭೆ ನಡೆಸಲು ಉದ್ದೇಶಿಸಿದ್ದರು.
ಇದನ್ನೂ ಓದಿ: ಮೇ.10ರಂದು ಸಿಎಂ ಬದಲಾವಣೆ ಆಗಬಹುದು: ಯತ್ನಾಳ್ ಭವಿಷ್ಯ
ಮುಂದಿನ ಚುನಾವಣೆಗೆ ಟಾಸ್ಕ್ ಕೊಡುವುದು, ಸಂಘಟನೆ ಯಾವ ರೀತಿ ಮಾಡಬೇಕು, ಸರ್ಕಾರ ಮತ್ತು ಪಕ್ಷ ಹೇಗೆ ಸಾಗಬೇಕು, ವಿವಾದಗಳಿಂದ ದೂರವಿದ್ದು ಆಡಳಿತ ನಡೆಸುವ ಬಗ್ಗೆ ಸೇರಿದಂತೆ ಹತ್ತು ಹಲವು ವಿಚಾರಗಳ ಕುರಿತು ಸಲಹೆ ಸೂಚನೆ ನೀಡಲಿದ್ದರು.
ರಾಜ್ಯ ಸಚಿವ ಸಂಪುಟ ವಿಸ್ತರಣೆ, ಪುನಾರಚನೆ, ನಾಯಕತ್ವ ಬದಲಾವಣೆ ಗೊಂದಲಕ್ಕೆ ಇತಿಶ್ರೀ ಹಾಡುವ ಸಾಧ್ಯತೆ ಇದೆ ಎನ್ನಲಾಗಿತ್ತು. ಆದರೆ ದಿಢೀರ್ ಎಂದು ಸಭೆಯನ್ನು ಅಮಿತ್ ಶಾ ರದ್ದುಪಡಿಸಿದ್ದಾರೆ. ಯಾವ ಕಾರಣಕ್ಕೆ ಸಭೆ ರದ್ದು ಪಡಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿಲ್ಲ.
ಇದನ್ನೂ ಓದಿ: ರಾಜ್ಯಕ್ಕೆ ಅಮಿತ್ ಶಾ ಆಗಮನ: ಸ್ವಾಗತಕ್ಕೂ ಮುನ್ನ ಬಿಎಸ್ವೈ ಭೇಟಿ ಮಾಡಿದ ಬೊಮ್ಮಾಯಿ
ಮಧ್ಯಾಹ್ನ ಸಿಎಂ ಬಸವರಾಜ ಬೊಮ್ಮಾಯಿಯ ಸರ್ಕಾರಿ ನಿವಾಸದಲ್ಲಿ ಭೋಜನಕೂಟ ಏರ್ಪಡಿಸಲಾಗಿದ್ದು, ಅಮಿತ್ ಶಾ ಭಾಗವಹಿಸಲಿದ್ದಾರೆ. ಈ ಭೋಜನ ಕೂಟಕ್ಕೆ ಸಚಿವರನ್ನೂ ಆಹ್ವಾನಿಸಲಾಗಿದ್ದು, ಅಲ್ಲಿಯೇ ಕೆಲ ವಿಷಯಗಳ ಕುರಿತು ಚರ್ಚೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.