ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವವಲಯ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರ ಚಿಕಿತ್ಸೆಗೆ ಸಂಬಂಧಿಸಿದಂತೆ ಕೈಗೊಂಡ ಕ್ರಮಗಳ ಕುರಿತು ವಸತಿ ಸಚಿವ ಹಾಗೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಪೂರ್ವ ವಲಯ ಉಸ್ತುವಾರಿ ಸಚಿವ ವಿ. ಸೋಮಣ್ಣ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ ನಡೆಯಿತು.
ಸಭೆಯಲ್ಲಿ ಶಾಸಕ ಸಿ. ರಘು, ಕೆ.ಜೆ.ಜಾರ್ಜ್, ರಿಜ್ವಾನ್ ಹರ್ಷದ್, ರಮೇಶ್ ಗೌಡ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ಆಡಳಿತಾಧಿಕಾರಿ ರಾಕೇಶ್ ಸಿಂಗ್, ವಸತಿ ಇಲಾಖೆಯ ಕಾರ್ಯದರ್ಶಿ ಮನೋಜ್ ಕುಮಾರ್ ಮೀನಾ, ಪೂರ್ವ ವಲಯ ಆಯುಕ್ತ ಮನೋಜ್ ಜೈನ್, ನಗರ ಪಾಲಿಕೆಯ ಜಂಟಿ ಆಯುಕ್ತೆ ಪಲ್ಲವಿ, ಮುಖ್ಯ ಇಂಜಿನಿಯರ್ ಪ್ರಭಾಕರ್ ಹಾಗೂ ಇನ್ನಿತರೆ ಅಧಿಕಾರಿಗಳು, ವೈಧ್ಯಾಧಿಕಾರಿಗಳು ಪಾಲ್ಗೊಂಡಿದ್ದರು.
ಈ ಸಭೆಯ ಪ್ರಮುಖ ಅಂಶಗಳು:
- ಅಂಬೇಡ್ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯನ್ನು ಸಂಪೂರ್ಣವಾಗಿ ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಸೂಚಿಸಲಾಗಿದೆ.
- ಅಂಬೇಡ್ಕರ್ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಆಕ್ಸಿಜನ್ ಸೌಲಭ್ಯವಿರುವ 175 ಬೆಡ್ ಗಳನ್ನು ಕೂಡಲೇ ಸೋಂಕಿತರ ಚಿಕಿತ್ಸೆಗೆ ಉಪಯೋಗಿಸಲಾಗುವುದು.
- ಚರಕ ಆಸ್ಪತ್ರೆಯ ಒಟ್ಟು 28 ಐಸಿಯು ಬೆಡ್ಗಳಲ್ಲಿ 10 ಐಸಿಯು ಬೆಡ್ಗಳು ಇಂದಿನಿಂದ ಕಾರ್ಯನಿರ್ವಹಿಸುತ್ತಿವೆ.
- ಚರ್ಚ್ ಆಫ್ ಸೌತ್ ಇಂಡಿಯಾ ಆಸ್ಪತ್ರೆಯಲ್ಲಿ 100 ಬೆಡ್ಗಳ ಕೋವಿಡ್ ಕೇರ್ ಸೆಂಟರ್ ಭಾನುವಾರದಿಂದ ಕಾರ್ಯನಿರ್ವಹಿಸುತ್ತದೆ.
- ಶಾಂತಿನಗರದಲ್ಲಿ 175 ಬೆಡ್ಗಳ ಕೋವಿಡ್ ಕೇರ್ ಸೆಂಟರ್ ಇಂದಿನಿಂದ ಪ್ರಾರಂಭವಾಗಿದೆ. ಸಿ ವಿ ರಾಮನ್ ನಗರ ಎಂಡಾಕ್ರಿನೋಲಜಿ ಸೆಂಟರ್ನಲ್ಲಿ 100 ಬೆಡ್ಗಳ ಕೋವಿಡ್ ಕೇರ್ ಸೆಂಟರ್ ಸೋಮವಾರದಿಂದ ಪ್ರಾರಂಭವಾಗುತ್ತದೆ.
- ಇ.ಎಸ್.ಐ ಇಂದಿರಾನಗರ ಆಸ್ಪತ್ರೆಯಲ್ಲಿ ಇನ್ನೂ ಐವತ್ತು ಆಕ್ಸಿಜನ್ ಬೆಡ್ಗಳನ್ನು ಹೆಚ್ಚಿಸಲು ಸೂಚಿಸಲಾಗಿದೆ.
- ವೆಂಟಿಲೇಟರ್ , ಆಕ್ಸಿಜನ್ , ರೆಮ್ಡೆಸಿವರ್ ಸಮಸ್ಯೆ ಬಗೆಹರಿಸಲಾಗುತ್ತಿದೆ.
- ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ 20 ಆಕ್ಸಿಜನ್ ಕಾನ್ಸಂಟ್ರೇಟರ್ ನೀಡಲು ತೀರ್ಮಾನಿಸಲಾಗಿದೆ.
- ಸಿವಿ ರಾಮನ್ ನಗರದ ಎಪಿಡೆಮಿಕ್ ಆಸ್ಪತ್ರೆಯ 24 ವೆಂಟಿಲೇಟರ್ಗಳನ್ನು ಬಳಕೆಗೆ ಸಜ್ಜುಗೊಳಿಸಲು ಮತ್ತು ಅಗತ್ಯವಿರುವ ಕಡೆ ವರ್ಗಾಯಿಸಲು ಸೂಚಿಸಿದೆ.
- ಹೆಚ್ಚಿನ ಪ್ರಕರಣದಲ್ಲಿ ಆರ್ಟಿ-ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ಬಂದ 2-3 ದಿನಗಳಲ್ಲಿ ಉಸಿರಾಟ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಸಿ.ಟಿ ಸ್ಕ್ಯಾನ್ ನಲ್ಲಿ ಇನ್ಫೆಕ್ಷನ್ ಜಾಸ್ತಿ ಇರುವುದು ಕಂಡುಬಂದಾಗ ಆಸ್ಪತ್ರೆಗೆ ದಾಖಲಿಸಲು ಬಿ.ಯು ನಂಬರ್ ಅಥವಾ ಎಸ್.ಆರ್.ಎಫ್ ಐಡಿ ಇಲ್ಲದಿರುವುದರಿಂದ ತೊಂದರೆ ಆಗುತ್ತಿತ್ತು. ಆದರೆ ಈಗ ಈ ಸಮಸ್ಯೆಯನ್ನು ಬಗೆಹರಿಸಲಾಗಿದೆ.
- ಕೋವಿಡ್ ಸೋಂಕಿನಿಂದ ಮೃತಪಟ್ಟ ಪ್ರಕರಣಗಳಲ್ಲಿ ವ್ಯಕ್ತಿಗಳ ಶವವನ್ನು ವಿಲೇವಾರಿ ಮಾಡುವ ಪ್ರಕ್ರಿಯೆಯನ್ನು ವಿಕೇಂದ್ರಿಕರಣಗೊಳಿಸಿ ಆಯಾ ಕ್ಷೇತ್ರಗಳ ಅಧಿಕಾರಿಗಳ ಸುಪರ್ದಿಗೆ ವಹಿಸಲು ಸೂಚಿಸಲಾಗಿದೆ.