ಬೆಂಗಳೂರು: ಹಣ ಮಂಜೂರು ಮಾಡುವಂತೆ ಒತ್ತಾಯಿಸಿ ಸರ್ಕಾರಿ ಕಚೇರಿಗೆ ನುಗ್ಗಿ ಕೆಎಎಸ್ ಅಧಿಕಾರಿಗೆ ಕೊಲೆ ಬೆದರಿಕೆ ಹಾಕಿದ ಆರೋಪದಡಿ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಿರಿಯ ಕೆಎಎಸ್ ಅಧಿಕಾರಿ ಬಿ.ಕೆ.ನಾಗರಾಜಪ್ಪ ಅವರು ಕುಮಾರ್ ಎಂಬುವರ ವಿರುದ್ದ ದೂರು ನೀಡಿದ್ದು, ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಕೆಎಎಸ್ ಅಧಿಕಾರಿ ಬಿ.ಕೆ.ನಾಗರಾಜಪ್ಪ ಮಹಾಲಕ್ಷ್ಮಿ ಲೇಔಟ್ನ ಭೋವಿಪಾಳ್ಯದಲ್ಲಿರುವ ಭೋವಿ ಅಭಿವೃದ್ಧಿ ನಿಗಮ ವ್ಯವಸ್ಥಾಪಕ ನಿರ್ದೇಶಕರಾಗಿ ಮಹಾಲಕ್ಷ್ಮೀ ಲೇಔಟ್ ನಲ್ಲಿರುವ ಕಚೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದರು. ಸೆ. 13ರಂದು ಮಧ್ಯಾಹ್ನ ಕಚೇರಿಗೆ ಅತಿಕ್ರಮವಾಗಿ ಪ್ರವೇಶಿಸಿದ್ದರು. ಈ ವೇಳೆ ನಕಲಿ ದಾಖಲಾತಿ ಸೃಷ್ಟಿಸಿ ಮಂಜೂರಾತಿ ಆಗಿರುವಂತೆ ನಂಬಿಸಿ, ಹಣ ಬಿಡುಗಡೆ ಮಾಡುವಂತೆ ಕುಮಾರ್ ಧಮ್ಕಿ ಹಾಕಿದ್ದಾರೆ ಎನ್ನಲಾಗ್ತಿದೆ.
ನಾವು ಹೇಳಿದ ವ್ಯಕ್ತಿಗಳಿಗೆ ಹಣ ಮಂಜೂರು ಮಾಡಬೇಕು ಎಂದು ನಕಲಿ ಸಹಿ ಇರುವ ಮಂಜೂರಾತಿ ಆದೇಶ ತೋರಿಸಿದ್ದಾರೆ. ಇಲ್ಲದಿದ್ದರೆ ಸರ್ಕಾರಿ ಕಚೇರಿಯಲ್ಲಿ ದೊಂಬಿ ಎಬ್ಬಿಸಿ ಬೆಂಕಿ ಇಡುವುದಾಗಿ ಕೊಲೆ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.