ಬೆಂಗಳೂರು : ಇಂಟರ್ನ್‌ಶಿಪ್ ಸರ್ಟಿಫಿಕೇಟ್ ಕೇಳಿದ್ದಕ್ಕೆ ಕಾನೂನು ವಿದ್ಯಾರ್ಥಿನಿ ಮೇಲೆ ಹಲ್ಲೆ ಮಾಡಿದ ಆರೋಪದಡಿ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದು ಕೋರಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿ ಆದೇಶಿಸಿದೆ. ತನ್ನ ವಿರುದ್ಧ ಪೊಲೀಸರು ದಾಖಲಿಸಿರುವ ಎಫ್ಐಆರ್ ರದ್ದುಪಡಿಸುವಂತೆ ಕೋರಿ ವಕೀಲ ವಸಂತ್ ಆದಿತ್ಯ ಎಂಬುವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ಪೀಠ ಈ ಆದೇಶ ಮಾಡಿದೆ.
ಪೀಠ ತನ್ನ ತೀರ್ಪಿನಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಅರ್ಜಿದಾರ ವಕೀಲರನ್ನು ಠಾಣೆಗೆ ಕರೆಸಿ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಪೊಲೀಸರು ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸಲಿ. ಪ್ರಕರಣ ತನಿಖಾ ಹಂತದಲ್ಲಿರುವಾಗ ನ್ಯಾಯಾಲಯ ಸಿಆರ್ಪಿಸಿ ಸೆಕ್ಷನ್ 482 ಅಡಿ ಪರಿಹಾರ ನೀಡಲಾಗದು ಎಂದು ಅಭಿಪ್ರಾಯಪಟ್ಟು ಅರ್ಜಿ ವಜಾಗೊಳಿಸಿದೆ.
ಆರೋಪವೇನು? : ಬನಶಂಕರಿಯ ಕಾನೂನು ವಿದ್ಯಾರ್ಥಿನಿ ಎಂಜಿ ರಸ್ತೆಯಲ್ಲಿರುವ ಕ್ರೀತಮ್ ಲಾ ಅಸೋಸಿಯೇಟ್ಸ್‌ನಲ್ಲಿ ವಕೀಲ ವಸಂತ್ ಆದಿತ್ಯ ಎಂಬುವರ ಬಳಿ ಇಂಟರ್ನ್‌ಶಿಪ್ ಮಾಡುತ್ತಿದ್ದರು. 2022ರ ಜನವರಿ 6ರಂದು ಇಂಟರ್ನ್‌ಶಿಪ್ ಸರ್ಟಿಫಿಕೇಟ್ ಕೇಳಲು ಕಚೇರಿಗೆ ಹೋಗಿದ್ದರು. ಆ ಬಳಿಕ ಹಲಸೂರು ಪೊಲೀಸ್ ಠಾಣೆಗೆ ದೂರು ನೀಡಿರುವ ವಿದ್ಯಾರ್ಥಿನಿ, ವಕೀಲ ವಸಂತ್ ಆದಿತ್ಯ ಇಂಟರ್ನ್‌ಶಿಪ್ ಸರ್ಟಿಫಿಕೇಟ್ ಕೇಳಿದ್ದಕ್ಕೆ ಎಲ್ಲ ಟಾಸ್ಕ್ ಮುಗಿಸಿಲ್ಲ.
ಹೀಗಾಗಿ, ಕೊಡಲಾಗದು ಎಂದರು. ಇದಕ್ಕೆ ವಿರೋಧ ವ್ಯಕ್ತಪಡಿಸಿದಾಗ ಅವ್ಯಾಚ್ಯ ಶಬ್ಧಗಳಿಂದ ನಿಂದಿಸಿ, ನೀರಿನ ಬಾಟಲಿಯನ್ನು ನನ್ನ ಮೇಲೆ ಎಸೆದರು. ಇದರಿಂದಾಗಿ ಎದೆಯ ಬಲಭಾಗಕ್ಕೆ ಪೆಟ್ಟಾಗಿದೆ. ಅಲ್ಲದೇ, ವಾಟ್ಸ್‌ಆ್ಯಪ್‌ನಲ್ಲಿ ಮತ್ತೆ ಅವ್ಯಾಚ್ಯ ಶಬ್ಧದಿಂದ ನಿಂದಿಸಿ ಮೆಸೇಜ್ ಕಳಿಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ. ದೂರಿನ ಮೇರೆಗೆ ಪೊಲೀಸರು, ಮಾಹಿತಿ ತಂತ್ರಜ್ಞಾನ ಕಾಯ್ದೆ-2000 ಹಾಗೂ ಐಪಿಸಿ ಸೆಕ್ಷನ್ 506, 509, 341, 324, 354 ಅಡಿ ಎಫ್ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಕರ್ನಾಟಕ ನಾಗರಿಕ ಸೇವೆಗಳ ಕಾಯ್ದೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಹೈಕೋರ್ಟ್