ಬೆಂಗಳೂರು: ಕಾರಿನಲ್ಲಿ ಮಾದಕ ವಸ್ತು ತಂದು ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದ ಆರೋಪದ ಮೇಲೆ ಉದ್ಯಮಿಯ ಪುತ್ರ ಫೈಝನ್ ಅಹಮದ್ ಎಂಬಾತನನ್ನು ಪಶ್ಚಿಮ ವಿಭಾಗದ ಕೆಂಗೇರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಆರೋಪಿಯಿಂದ ಮಾದಕ ಪೌಡರ್ ಹಾಗೂ ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ.
ಮಾರ್ಚ್ 9 ರಂದು ಸಂಜೆ ವ್ಯಕ್ತಿಯೊಬ್ಬ ಕಾರಿನಲ್ಲಿ ಬಿಳಿ ಬಣ್ಣದ ಪೌಡರ್ ರೀತಿಯ ಮಾದಕ ವಸ್ತುವನ್ನು ತಂದು ಸಾರ್ವಜನಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿತ್ತು ಎಂದು ಪ್ರಕರಣದ ಕುರಿತು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಕಾರ್ಯ ಪ್ರವೃತ್ತರಾದ ಇನ್ಸ್‌ಪೆಕ್ಟರ್ ವಸಂತ್ ಹಾಗೂ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದರು. ಆರೋಪಿ ನೀಡಿದ ಮಾಹಿತಿ ಮೇರೆಗೆ 5 ಗ್ರಾಂ ತೂಕದ ಮಾದಕ ವಸ್ತು 2 ಸಾವಿರ ನಗದು ಮತ್ತು ಕೃತ್ಯಕ್ಕೆ ಬಳಸಿದ್ದ ಕಾರನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.