ಬೆಂಗಳೂರು: ಕೆಂಪೇಗೌಡ ಉದ್ಯಾನವನದ ಅಭಿವೃದ್ಧಿ ಕಾಮಗಾರಿಯನ್ನು ಶಾಸಕರು ತಡೆಹಿಡಿದ್ದಾರೆ. ನನ್ನ ಮುಂದೆ ಸೋತಿದ್ದ ಜಿದ್ದಿನಿಂದ, ನನಗೆ ಹೆಸರು ಬರಬಾರದು ಎಂದು ಹೀಗೆ ಮಾಡಿದ್ದಾರೆ ಎಂದು ದಾಸರಹಳ್ಳಿ ಜೆಡಿಎಸ್ ಶಾಸಕನ ಮೇಲೆ ನೇರವಾಗಿ ಪಾಲಿಕೆ ಸದಸ್ಯರೊಬ್ಬರು ಅಸಮಾಧಾನ ಹೊರಹಾಕಿದ್ದಾರೆ.
ವಾರ್ಡ್-13 ಮಲ್ಲಸಂದ್ರದಲ್ಲಿ 26 ಎಕರೆ ವಿಸ್ತಾರವಾದ ಜಾಗದಲ್ಲಿ ಕೆಂಪೇಗೌಡ ಕೋಟೆ, ಕ್ರೀಡಾಂಗಣ, ಸಾಂಸ್ಕೃತಿಕ ಸಭಾಂಗಣ, ನೀರಿನ ಕಾರಂಜಿ, ಗ್ರಂಥಾಲಯ ಹೀಗೆ ವಿವಿಧ ಕಾಮಗಾರಿಗಳನ್ನು ಇಪ್ಪತ್ತು ಕೋಟಿ ರೂ. ವೆಚ್ಚದಲ್ಲಿ ಪಾಲಿಕೆ ಬಿಜೆಪಿ ಸದಸ್ಯ ಲೋಕೇಶ್ ನಡೆಸುತ್ತಿದ್ದರು. ಆದ್ರೆ ಕಾರ್ಪೋರೇಟರ್ ಚುನಾವಣೆಯಲ್ಲಿ ತನ್ನ ಮುಂದೆ ಸೋತು, ವಿಧಾನಸಭೆ ಚುನಾವಣೆಯಲ್ಲಿ ಜೆಡಿಎಸ್ ಪಕ್ಷದಿಂದ ಶಾಸಕರಾಗಿ ಗೆದ್ದ ಮಂಜುನಾಥ್ ಈ ಎಲ್ಲಾ ಕೆಲಸಗಳನ್ನು ತಡೆಹಿಡಿದಿದ್ದಾರೆ ಎಂದು ಆರೋಪಿಸಿದ್ದಾರೆ.
ಮೂರು ಎಕರೆಯಲ್ಲಿ ಕ್ರೀಡಾಂಗಣ, ಎರಡು ಕೋಟಿ ರೂ. ವೆಚ್ಚದಲ್ಲಿ ಯೋಗ ಕೇಂದ್ರ, ಎರಡು ಕೋಟಿ ರೂ. ವೆಚ್ಚದಲ್ಲಿ ಬ್ಯಾಡ್ಮಿಂಟನ್ ಕೋರ್ಟ್, ಒಂದು ಕೋಟಿ ರೂ. ವೆಚ್ಚದಲ್ಲಿ ಸಭಾಂಗಣ, ಅಲ್ಲದೆ ಪಾರ್ಕ್, ಫುಟ್ ಪಾತ್ ಅಭಿವೃದ್ಧಿ, ಒಂದು ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡ ಕೋಟೆ ನಿರ್ಮಾಣ ಮಾಡಲಾಗಿದೆ. ಆದರೆ ಎಲ್ಲಾ ಕಾಮಗಾರಿಗಳು ಅರ್ಧದಲ್ಲೇ ಬಾಕಿ ಉಳಿದಿವೆ.
ಈ ಬಗ್ಗೆ ಮಾತನಾಡಿದ ವಾರ್ಡ್ 13 ಮಲ್ಲಸಂದ್ರ ಕಾರ್ಪೋರೇಟರ್ ಲೋಕೇಶ್ ಮಾತನಾಡಿ, ಸರ್ವೇ ನಂ. 33 ರಲ್ಲಿ ಸರ್ಕಾರಿ ಗೋಮಾಳದ ಜಾಗ ಇದೆ. ಇದರಲ್ಲಿ ನಾಲ್ಕು ಎಕರೆ ಬಿಬಿಎಂಪಿಗೆ ಹಸ್ತಾಂತರ ಆಗಿದೆ. ಇನ್ನು ನಾಲ್ಕು ಎಕರೆ ಸಾರ್ವಜನಿಕರಿಂದ ಒತ್ತುವರಿಯಾಗಿದೆ. ಉಳಿದ 26 ಎಕರೆ ಜಾಗಕ್ಕೆ ತಡೆಗೋಡೆ ನಿರ್ಮಿಸಿ, ಪಾಲಿಕೆಯ ಇಪ್ಪತ್ತು ಕೋಟಿ ರೂ. ವೆಚ್ಚದಲ್ಲಿ ಕೆಂಪೇಗೌಡ ಉದ್ಯಾನವನ ನಿರ್ಮಾಣಕ್ಕೆ ಮುಂದಾಗಿದ್ದೆವು. ಆದ್ರೆ ಸ್ಥಳೀಯ ದಾಸರಹಳ್ಳಿ ಶಾಸಕ ಮಂಜುನಾಥ್, ಜಮೀನು ಹಸ್ತಾಂತರವಾಗಿಲ್ಲ ಎಂದು ಪತ್ರ ಬರೆದಿದ್ರು. ಕಡೆಗೆ ಕಂದಾಯ ಇಲಾಖೆಗೂ ಪತ್ರ ಬರೆದು ಕೆಲಸ ನಿಲ್ಲಿಸಲು ಆದೇಶ ಮಾಡಿಸಿದ್ದಾರೆ. ಪ್ರಕರಣ ದಾಖಲಿಸಿ, ಸ್ಟೇ ಕೊಡುವ ಹಾಗೆಯೂ ಮಾಡಿದ್ದಾರೆ ಎಂದು ಆರೋಪಿಸಿದರು.
ಒಟ್ಟಿನಲ್ಲಿ ಕಾರ್ಪೋರೇಟರ್ ಹಾಗೂ ಶಾಸಕರ ಒಳಜಗಳಕ್ಕೆ ಅಭಿವೃದ್ಧಿ ಕಾಮಗಾರಿಯೇ ಸ್ಥಗಿತಗೊಂಡಂತಾಗಿದೆ. ಅಲ್ಲದೆ ಸಾರ್ವಜನಿಕ ತೆರಿಗೆ ಹಣ ಇಪ್ಪತು ಕೋಟಿ ರೂ. ಸದುಪಯೋಗವಾಗದೆ, ವ್ಯರ್ಥವಾಗುವಂತಾಗಿದೆ.