ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರನ್ನು ಇಂದು ಭೇಟಿ ಮಾಡಿ ನನಗೆ ನ್ಯಾಯ ಕೊಡಿ ಅಂತ ಮನವಿ ಮಾಡಿದ್ದೇನೆ ಎಂದು ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸದಾಶಿವ ನಗರದ ನಿವಾಸಕ್ಕೆ ಇಂದು ಭೇಟಿ ನೀಡಿ ಮನವಿ ಸಲ್ಲಿಸಿದ ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಮಾಜಿ ಮೇಯರ್ ಸಂಪತ್ ರಾಜ್, ಜಾಕೀರ್ ವಿರುದ್ಧ ಕ್ರಮಕ್ಕೆ ಮನವಿ ಸಲ್ಲಿಸಿದ್ದೇನೆ. ಅವರು ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಕ್ರಮ ತೆಗೆದುಕೊಳ್ತಾರೆಂಬ ವಿಶ್ವಾಸವಿದೆ. ನನ್ನ ಮನೆಗೆ ಬೆಂಕಿ ಇಟ್ಟ ಹಾಗೂ ಪೊಲೀಸ್ ಠಾಣೆಯನ್ನು ಸುಟ್ಟಿರುವ ವ್ಯಕ್ತಿಗಳು ಯಾರೇ ಆಗಿರಲಿ ಅವರ ವಿರುದ್ಧ ಕ್ರಮ ಆಗಲೇಬೇಕು. ಪಕ್ಷದಿಂದಲೂ ಅವರನ್ನ ಉಚ್ಛಾಟಿಸಬೇಕು ಎಂದರು.
ಪೊಲೀಸ್ ತನಿಖೆಯಲ್ಲಿ ಏನೇನು ಆಗಿದೆ ಎನ್ನುವುದನ್ನು ಕೂಡ ಅಧ್ಯಕ್ಷರಿಗೆ ವಿವರಿಸಿದ್ದೇನೆ. ಶಿಸ್ತು ಪಾಲನಾ ಸಮಿತಿಗೆ ಪತ್ರ ಬರೆದು ಮಾಹಿತಿ ನೀಡುತ್ತೇನೆ ಎಂದು ಅಧ್ಯಕ್ಷರು ಭರವಸೆ ನೀಡಿದ್ದಾರೆ. ಈಗಲಾದರೂ ನನಗೆ ನ್ಯಾಯ ಸಿಗಲಿದೆ ಎಂಬ ನಂಬಿಕೆ ಮೂಡಿದೆ ಎಂದರು.
ರಾಜ್ಯ ಕಾಂಗ್ರೆಸ್ನ ಹಿರಿಯ ನಾಯಕರನ್ನು ಭೇಟಿ ಮಾಡಿ ಮನವಿ ಮಾಡಿಕೊಂಡಿದ್ದೇನೆ. ಇನ್ನೊಮ್ಮೆ ಭೇಟಿಯಾಗಿ ಮನವಿ ಮಾಡುತ್ತೇನೆ. ನನಗೆ ತೊಂದರೆ ನೀಡಿದ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ್ದೇನೆ. ಕಾಂಗ್ರೆಸ್ ರಾಜ್ಯ ನಾಯಕರು ಕ್ರಮ ಕೈಗೊಳ್ಳುತ್ತಾರೆ ಎಂಬ ವಿಶ್ವಾಸ ಇದೆ ಎಂದಿದ್ದಾರೆ.