ದೇವನಹಳ್ಳಿ : ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಾರ್ಯಾಚರಣೆ ನಡೆಸಿದ ಕಸ್ಟಮ್ಸ್ ಅಧಿಕಾರಿಗಳು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಸುಮಾರು 19 ಲಕ್ಷ ರೂ. ಮೌಲ್ಯದ ಚಿನ್ನ ಮತ್ತು ವಿದೇಶಿ ಸಿಗರೇಟ್ನ್ನು ವಶಕ್ಕೆ ಪಡೆದಿದ್ದಾರೆ.
ಏರ್ ಪೋರ್ಟ್ನ ಕಸ್ಟಮ್ಸ್ ಅಧಿಕಾರಿಗಳು ಲಗೇಜ್ ತಪಾಸಣೆ ನಡೆಸುತ್ತಿದ್ದರು. ಈ ಸಮಯದಲ್ಲಿ ದುಬೈನಿಂದ ಬಂದ ಇಬ್ಬರು ಪ್ರಯಾಣಿಕರ ಲಗೇಜ್ ಬ್ಯಾಗ್ಗಳನ್ನು ಸ್ಕ್ಯಾನಿಂಗ್ ಮಾಡುವಾಗ ಅನುಮಾನ ಬಂದಿದೆ. ಬ್ಯಾಗ್ ಪರಿಶೀಲನೆ ನಡೆಸಿದಾಗ ಚಿನ್ನ ಮತ್ತು ವಿದೇಶಿ ಸಿಗರೇಟ್ ಪತ್ತೆಯಾಗಿವೆ.
ಫುಡ್ ಪ್ಯಾಕೆಟ್ಗಳ ರೀತಿಯಲ್ಲಿ ಸಣ್ಣ ಸಣ್ಣ ತುಂಡುಗಳಾಗಿ ಮಾಡಿ, ಮರೆಮಾಚಿ ಚಿನ್ನ ಮತ್ತು ಸಿಗರೇಟ್ ಸಾಗಾಣಿಕೆ ಮಾಡುತ್ತಿದ್ದರು. ಬಂಧಿತ ಆರೋಪಿಗಳನ್ನು ಮಹಮ್ಮದ್, ಅರಶಕ್ ಅಬೂಬಕರ್ ಎಂದು ಗುರುತಿಸಲಾಗಿದೆ.
ಬಂಧಿತರಿಂದ 13 ಲಕ್ಷ ರೂ. ಮೌಲ್ಯದ 165.89 ಗ್ರಾಂ ಚಿನ್ನ ಮತ್ತು 5.98 ಲಕ್ಷ ಮೌಲ್ಯದ 29940 ಫಾರಿನ್ ಸಿಗರೇಟ್ ವಶಕ್ಕೆ ಪಡೆಯಲಾಗಿದೆ. ಆರೋಪಿಗಳನ್ನು ವಶಕ್ಕೆ ಪಡೆದಿರುವ ಕಸ್ಟಮ್ಸ್ ಅಧಿಕಾರಿಗಳು ವಿಚಾರಣೆ ಮುಂದುವರೆಸಿದ್ದಾರೆ.