ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ 13ನೇ ಆವೃತ್ತಿಯ ಏರ್ ಶೋ ನಾಳೆಯಿಂದ ನಡೆಯಲಿದ್ದು, ಇಂದು ಲೋಹದ ಹಕ್ಕಿಗಳ ತಾಲೀಮು ಆರಂಭವಾಗಿದೆ.
ಯಲಹಂಕ ವಾಯುನೆಲೆಯಲ್ಲಿ ನಾಳೆಯಿಂದ ವಿಶ್ವದ ಮೊಟ್ಟ ಮೊದಲ ಹೈಬ್ರಿಡ್ ವೈಮಾನಿಕ ಪ್ರದರ್ಶನವಾಗಲಿದ್ದು, ಇಂದು ಪೂರ್ಣ ಪ್ರಮಾಣದಲ್ಲಿ ರನ್ ವೇಗೆ ವಿಮಾನಗಳು ಇಳಿಯಲಿವೆ. ಫೆಬ್ರವರಿ 3ರಿಂದ 7ರವರೆಗೆ ಐದು ದಿನಗಳ ಕಾಲ ಏರ್ ಶೋ ನಡೆಯಲಿದ್ದು, ನಾಳೆ ಪೂರ್ಣ ಪ್ರಮಾಣದಲ್ಲಿ ಲೋಹದ ಹಕ್ಕಿಗಳ ಕಲರವ ಕಣ್ತುಂಬಿಕೊಳ್ಳಬಹುದಾಗಿದೆ.
ಇನ್ನು, ಇದೇ ಮೊದಲ ಬಾರಿಗೆ ಸೂರ್ಯ ಕಿರಣ್ ಹಾಗೂ ಸಾರಂಗ್ ವೈಮಾನಿಕ ಪ್ರದರ್ಶನ ತಂಡಗಳು ಜಂಟಿ ಪ್ರದರ್ಶನ ನೀಡಲಿವೆ. ಇವುಗಳ ಜೊತೆಗೆ 'ಚಿನೂಕ್ ಟ್ವಿನ್ ಎಂಜಿನ್' ಹೆಲಿಕಾಪ್ಟರ್ ವೈಮಾನಿಕ ಪ್ರದರ್ಶನದಲ್ಲಿ ಭಾಗವಹಿಸುತ್ತಿರುವುದು ವಿಶೇಷ.
ಇದನ್ನೂ ಓದಿ: ರಾಮನ ಭಾರತದಲ್ಲಿ ಪೆಟ್ರೋಲ್‌ಗೆ 93, ರಾವಣನ ಲಂಕೆಯಲ್ಲಿ 51: ಕೇಂದ್ರದ ವಿರುದ್ಧ ಸ್ವಾಮಿ ಬಾಣ
ಪ್ರತ್ಯಕ್ಷ ಹಾಗೂ ವರ್ಚುಯಲ್ ಎರಡೂ ಮಾದರಿಯಲ್ಲಿ 13ನೇ ಆವೃತ್ತಿಯ ಏರೋ ಇಂಡಿಯಾ ಶೋ ನಡೆಯಲಿದ್ದು, ಭಾರತ ಸೇರಿದಂತೆ ಇನ್ನಿತರ ದೇಶಗಳ 63 ವಿಮಾನಗಳು ಪ್ರದರ್ಶನಗೊಳ್ಳಲಿದೆ. 42 ವಿಮಾನಗಳು ದಿನದಲ್ಲಿ 7 ಬಾರಿ ಹಾರಾಟ ನಡೆಸಿ ವೈಮಾನಿಕ ಪ್ರದರ್ಶನ ನೀಡಲಿವೆ. ಡಕೋಟಾ, ಸುಖೋಯ್, ರಫೆಲ್, ಎಲ್ ಸಿ ಹೆಚ್, ಎಲ್ ಯು ಎಚ್, ಜಾಗ್ವಾರ್, ಹಾಕ್ ಸೇರಿ ಇನ್ನಿತರ ಫೈಟರ್ ಜೆಟ್ ಏರ್ ಕ್ರಾಫ್ಟ್ ಪ್ರದರ್ಶನದಲ್ಲಿ ಪಾಲ್ಗೊಳ್ಳಲಿವೆ.