ಬೆಂಗಳೂರು: ಕೇಂದ್ರ ಗೃಹ ಸಚಿವ ಅಮಿತ್ ಶಾ ಅಪಾಯಿಂಟ್ಮೆಂಟ್ ಕೊಟ್ಟ ತಕ್ಷಣ ದೆಹಲಿಗೆ ತೆರಳುವುದಾಗಿ ಮುಖ್ಯಮಂತ್ರಿ ಬಿ ಎಸ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಸಚಿವ ಸಂಪುಟ ವಿಸ್ತರಣೆಗೆ ದೆಹಲಿಗೆ ತೆರಳುವ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಅಮಿತ್ ಶಾ ಅವರ ಟೈಮ್ ಕೇಳಿದ್ದೇನೆ. ಅವರು ಸಮಯ ನಿಗದಿ ಆದ ಕೂಡಲೇ ದೆಹಲಿಗೆ ತೆರಳುತ್ತೇನೆ ಎಂದು ಸ್ಪಷ್ಟಪಡಿಸಿದರು.
ಗಾಂಧೀಜಿ ಕನಸು ಸಾಕಾರಕ್ಕಾಗಿ ಹಲವು ಯೋಜನೆ
ರಾಷ್ಟ್ರಪಿತ ಮಹಾತ್ಮ ಗಾಂಧಿ ಜಯಂತಿ ಮತ್ತು ಲಾಲ್‌ಬಹದ್ದೂರು ಶಾಸ್ತ್ರಿ ಜನ್ಮ ದಿನೋತ್ಸವ ಹಿನ್ನೆಲೆ ವಿಧಾನಸೌಧದಲ್ಲಿನ ಗಾಂಧೀಜಿ ಪುತ್ಥಳಿ ಹಾಗೂ ಶಾಸ್ತ್ರಿ ಪುತ್ಥಳಿ ಬಳಿ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದ ಬಳಿಕ ಮಾತನಾಡುತ್ತಾ, ಗಾಂಧೀಜಿ ಜನ್ಮ ದಿನವನ್ನು ಅಹಿಂಸಾ ದಿನವನ್ನಾಗಿ ಆಚರಿಸಲಾಗುತ್ತದೆ. ಗುಡಿ ಕೈಗಾರಿಕೆ, ಸ್ವಚ್ಛತೆಗೆ ಆದ್ಯತೆ ನೀಡಿದವರು ಗಾಂಧೀಜಿ. ನಾವೆಲ್ಲಾ ಸ್ವಚ್ಛ ಭಾರತಕ್ಕೆ ಕೈಜೋಡಿಸಬೇಕು. ಗಾಂಧೀಜಿಯವರ ಕನಸುಗಳ ಸಾಕಾರಕ್ಕೆ ಸರ್ಕಾರ ಹಲವು ಯೋಜನೆಗಳನ್ನ ಕೈಗೊಂಡಿದೆ ಎಂದು ತಿಳಿಸಿದರು.
ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಲಾಲ್ ಬಹಾದ್ದೂರ್ ಶಾಸ್ತ್ರಿ. ಮೂರ್ತಿ ಚಿಕ್ಕದಾದರೂ, ಕೀರ್ತಿ ದೊಡ್ಡದು ಎಂಬ ಖ್ಯಾತಿ ಅವರದ್ದು. ಭಾರತದ ಮೊದಲ ರೈಲ್ವೆ ಸಚಿವರಾಗಿ, ಹಂತ ಹಂತದಲ್ಲಿ ಹಲವು ಹುದ್ದೆಗಳನ್ನ ನಿರ್ವಹಿಸಿದವರು. ಜೈ ಜವಾನ್, ಜೈಕಿಸಾನ್ ಘೋಷ ವಾಕ್ಯ ಇಂದಿಗೂ ಜನರನ್ನು ರೋಮಾಂಚನಗೊಳಿಸುತ್ತದೆ ಎಂದು ಸಿಎಂ ಹೇಳಿದರು.
ಪತ್ರಕರ್ತರಿಗೆ ಹೆಲ್ತ್ ಕಾರ್ಡ್ ಬಿಡುಗಡೆ: ಇದೇ ವೇಳೆ ಸಿಎಂ ವಾರ್ತಾ ಇಲಾಖೆಯಿಂದ ಪತ್ರಕರ್ತರಿಗೆ ನೀಡುವ ಹೆಲ್ತ್ ಕಾರ್ಡ್ನ್ನು ಬಿಡುಗಡೆಗೊಳಿಸಿದರು. ಸಾಂಕೇತಿಕವಾಗಿ ಮೂವರು ಪತ್ರಕರ್ತರಿಗೆ ಹೆಲ್ತ್ ಕಾರ್ಡ್ ವಿತರಿಸಿದರು.